ಬೆಳಗಾವಿ: ಪ್ರೀತಿಸಿದ ಯುವತಿ ಜೊತೆಗೆ ಮದುವೆಗೆ ಒಪ್ಪಿದರೂ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಕಿರಿಯ ಮಗನನ್ನು ಹಿರಿಯ ಮಗನೊಂದಿಗೆ ಸೇರಿ ತಂದೆಯೇ ಚಟ್ಟ ಕಟ್ಟಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಉಳ್ಳಾಗಡ್ಡಿ (25) ಹತ್ಯೆಯಾದ ದುರ್ದೈವಿ.
ಮಂಜುನಾಥ ಯುವತಿಯೊಬ್ಬಳನ್ನು ಪ್ರೀತಿಸಿದ್ದು, ಮನೆಯವರು ಒಪ್ಪಿರಲಿಲ್ಲ. ಆದರೂ ಮದುವೆ ಮಾಡಿಸುವಂತೆ ಪ್ರತಿನಿತ್ಯ ಕುಡಿದು ಬಂದು ಕುಟುಂಬಸ್ಥರಿಗೆ ಕಿರಿಕಿರಿ ಮಾಡುತ್ತಿದ್ದ. ಬಳಿಕ ಕುಟುಂಬಸ್ಥರು ಒಪ್ಪಿಗೆ ಸೂಚಿಸಿ, ನಿಶ್ಚಿತಾರ್ಥ ಮಾಡಿದ್ದರು. ಅದಾದ ಬಳಿಕವೂ ಸಹ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.
ಮದುವೆಗೆ ಅಸ್ತು ಅಂದ ಬಳಿಕವೂ ಕುಡಿದು ಬಂದು ನಿತ್ಯ ಗಲಾಟೆ ಮಾಡುತ್ತಿದ್ದ ಹಿನ್ನಲೆ ಬೇಸತ್ತ ತಂದೆ ನಾಗಪ್ಪ ಉಳ್ಳೆಗಡ್ಡಿ(63) ತನ್ನ ಹಿರಿಯ ಮಗ ಗುರುಬಸಪ್ಪ ಉಳ್ಳೆಗಡ್ಡಿ(28)ಯೊಂದಿಗೆ ಸೇರಿ ಕಲ್ಲು ಇಟ್ಟಿಗೆಗಳಿಂದ ಕಿರಿಯ ಮಗನ ತಲೆ ಜಜ್ಜಿ ಹತ್ಯೆ ಮಾಡಲಾಗಿದೆ.
ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ಎಸ್ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.