Varamahalakshmi festival: ಕರ್ನಾಟಕದ ಮಹಿಳೆಯರಿಗೆ ವರಮಹಾಲಕ್ಷ್ಮಿ ಹಬ್ಬವೆಂದರೆ ಅತ್ಯಂತ ಸಡಗರ ಮತ್ತು ಪೂಜಾನೀಯ ಹಬ್ಬ. ವರಮಹಾಲಕ್ಷ್ಮಿ ವ್ರತದ ಸಮಯದಲ್ಲಿ ಲಕ್ಷ್ಮಿದೇವಿಯನ್ನು ದೇವಿಯನ್ನು ಅಲಂಕರಿಸಿ, ಮನೆಯನ್ನು ಸಿಂಗರಿಸಿ ಸಂಭ್ರಮದಿಂದ ಪೂಜಿಸಲಾಗುತ್ತದೆ. ಮಹಿಳೆಯರು ದೇವಿಯ ಪ್ರತಿನಿಧಿಗಳಾಗಿ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುತ್ತಾರೆ. ಈ ವ್ರತವನ್ನು ಆಚರಿಸುವುದು ಹೇಗೆ ಎ೦ಬ ಮಾಹಿತಿ ಇಲ್ಲಿದೆ.
ವ್ರತಾಚರಣೆ
- ಮಹಿಳೆಯರು ಬೇಗನೆ ಎದ್ದು, ಸ್ನಾನ ಇತ್ಯಾದಿ ಕರ್ಮಗಳನ್ನು ಮುಗಿಸಿ, ಉಪವಾಸ ವ್ರತ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು.
- ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿಡಿ.
- ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಬೇಕು.
- ಬಳಿಕ ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯದೆಲೆಯನ್ನು ಕಲಶದ ಸುತ್ತ ಜೋಡಿಸಬೇಕು.
- ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಸೀರೆಯನ್ನು ಉಡಿಸಿ ಒಡವೆಗಳನ್ನು ಹಾಕಿ ಅಲಂಕರಿಸಬೇಕು.
ಕೈಗೆ ಕಂಕಣ
- ವರಲಕ್ಷ್ಮಿಪೂಜೆಯ ಸಮಯದಲ್ಲಿ ಮಹಿಳೆಯರು ತಮ್ಮ ಕೈಗೆ ಕಂಕಣವನ್ನು ಕಟ್ಟಿಕೊಳ್ಳಬೇಕು.
- ವರಲಕ್ಷ್ಮಿಪೂಜೆಯ ಸಮಯದಲ್ಲಿ ದೇವರ ಮುಂದೆ ಇಡುವ ಸಿಹಿತಿಂಡಿಗಳು, ನೈವೇದ್ಯಗಳನ್ನು ವಾಯನ ಎಂದು ಕರೆಯಲಾಗುತ್ತದೆ.
- ಸಂಜೆಯ ಸಮಯದಲ್ಲಿ ದೇವಿಗೆ ಆರತಿಯನ್ನು ಅರ್ಪಿಸಬೇಕು.
- ಮರುದಿನ, ಕಲಶದ ನೀರನ್ನು ಮನೆಯ ಸುತ್ತಲೂ ಚಿಮುಕಿಸುವುದು ಉತ್ತಮ.
- ಕಲಶದಲ್ಲಿದ್ದ ಅಕ್ಕಿಯ ಕಾಳುಗಳಿ೦ದ ಸಿಹಿಯನ್ನು ತಯಾರಿಸಿ ಮನೆಯ ಸದಸ್ಯರಿಗೆಲ್ಲಾ ಹಂಚುವುದು ಶ್ರೇಯಸ್ಕರ.
ಕಡಲೆಬೇಳೆ ನೈವೇದ್ಯ
- ಲಕ್ಷ್ಮಿಗೆ ಪ್ರಿಯವಾದ ಧಾನ್ಯವೆಂದರೆ ಕಡಲೆಬೇಳೆ.
- ಹಾಗಾಗಿ ಈ ದಿನ ನೈವೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ ಪಾಯಸ, ಹೋಳಿಗೆ ಇತ್ಯಾದಿ ಸಿಹಿ ತಿನಿಸುಗಳನ್ನು ಅರ್ಪಿಸುವುದು ಉತ್ತಮ.
- ವ್ರತದ ನೇಮದ ಪ್ರಕಾರ ಪೂಜೆಯ ಸಿದ್ಧತೆಗಳೆಲ್ಲ ಆದ ನಂತರ ಮೊದಲು ವಿಘ್ನನಿವಾರಕ ಗಣಪತಿಯನ್ನು ಪೂಜಿಸಬೇಕು.
- ಇದಾದ ಮೇಲೆ ವರಲಕ್ಷ್ಮಿ ವ್ರತವನ್ನು ಆರಂಭಿಸಬೇಕು.
- ಮನೆಗೆ ಮುತ್ತೈದೆಯರನ್ನು ಕರೆದು ಅರಿಶಿಣ, ಕುಂಕುಮ, ಸಿಹಿ ಕೊಡುವುದು ವಾಡಿಕೆ.
ವ್ರತದ ಮಂತ್ರ
ವರಮಹಾಲಕ್ಷ್ಮಿ ವ್ರತದ ದಿನದಂದು ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ‘ಓಂ ಕ್ರೀಂ ಶ್ರೀಂ ಲಕ್ಷ್ಮಿಯ್ಯೋ ನಮಃ’ ಮಂತ್ರವನ್ನು ಪಠಿಸಬೇಕು.
ಆಚರಣೆ ಯಾಕೆ?
ವರಮಹಾಲಕ್ಷ್ಮಿ ವ್ರತವು ವಿವಾಹಿತ ಮಹಿಳೆಯರಿಗೆ ಶ್ರೇಷ್ಠವಾದ ವ್ರತವಾಗಿದೆ. ಅವರು ಉತ್ತಮ ಸಂತಾನಕ್ಕಾಗಿ, ಪತಿಯ ಆರೋಗ್ಯ ಮತ್ತು ಆಯಸ್ಸಿಗಾಗಿ, ಸಂಪತ್ತನ್ನು ಪಡೆದುಕೊಳ್ಳುವುದಕ್ಕಾಗಿ ಈ ವ್ರತವನ್ನು ಆಚರಿಸುತ್ತಾರೆ. ಲಕ್ಷ್ಮಿ ದೇವಿಯ ವರಲಕ್ಷ್ಮಿ ರೂಪವು ವರಗಳನ್ನು ನೀಡುವುದಲ್ಲದೆ, ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎಂದು ನ೦ಬಲಾಗಿದೆ.




