ಚೆನ್ನೈ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಸಾರಥಿ” ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನಗೆದ್ದ ಬಹುಭಾಷಾ ಖ್ಯಾತ ಹಿರಿಯ ನಟ ಶರತ್ ಕುಮಾರ್ ಮತ್ತು ಅವರ ಪತ್ನಿ ನಟಿ ರಾಧಿಕಾ ಅವರಿಗೆ ಚೆನ್ನೈನ ವಿಶೇಷ ನ್ಯಾಯಾಲಯ ಬುಧವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಜೋಡಿಯು ಇನ್ನೊಬ್ಬ ನಿರ್ಮಾಪಕ ಲಿಸ್ಟಿನ್ ಸ್ಟೀಫನ್ ಅವರ ಜೊತೆ ಸೇರಿ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದರು. ಈ ಕ್ರಮದಲ್ಲಿ, 2014 ರಲ್ಲಿ ಸಿನಿಮಾ ನಿರ್ಮಾಣಕ್ಕಾಗಿ ರೇಡಿಯನ್ಸ್ ಎಂಬ ಕಂಪನಿಯಿಂದ 2 ಕೋಟಿ ರೂ. ಸಾಲ ಪಡೆದುಕೊಂಡಿದ್ದರು.
ಆ ನಂತರ 2017 ರಲ್ಲಿ ರೇಡಿಯನ್ಸ್ ಕಂಪನಿ ಹಣವನ್ನು ಮರುಪಾವತಿ ಮಾಡಲು ಕೇಳಿದೆ. ನಟ ಶರತ್ ಕುಮಾರ್ ದಂಪತಿ ಹಣವನ್ನು ಚೆಕ್ ರೂಪದಲ್ಲಿ ಪಾವತಿಸಿದ್ದಾರೆ. ಆದರೆ ಆ ಚೆಕ್ ಬೌನ್ಸ್ ಆಗಿದೆ. ಇದರಿಂದ ರೇಡಿಯನ್ಸ್ ಕಂಪನಿ ನಟ ಶರತ್ ಕುಮಾರ್ ದಂಪತಿ ವಿರುದ್ಧ ಚೆನ್ನೈನ ಸೈದಪೇಟೆ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. 2019 ರಲ್ಲಿ ಈ ಪ್ರಕರಣ ಕೈಗೆತ್ತಿಕೊಂಡ ವಿಶೇಷ ನ್ಯಾಯಾಲಯ, ನಟ ಶರತ್ ಕುಮಾರ್, ರಾಧಿಕಾ ಮತ್ತು ಲಿಸ್ಟಿನ್ ಸ್ಟೀಫನ್ ಅವರನ್ನು ತಕ್ಷಣ ಬಂಧಿಸುವಂತೆ ಆದೇಶಿಸಿತ್ತು.
ಈ ಸಮಯದಲ್ಲಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ನಟ ಶರತ್ ಕುಮಾರ್ ದಂಪತಿಗಳು ಮದ್ರಾಸ್ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು. ಇದರಿಂದ ಹೈಕೋರ್ಟ್ ಈ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿತು. ಈ ಪ್ರಕರಣ ಕಳೆದ ಎರಡು ವರ್ಷಗಳಿಂದ ಚೆನ್ನೈ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಲೇ ಇತ್ತು. ಹಾಗೇ, ಬುಧವಾರ (ಏಪ್ರಿಲ್ 7) ಮತ್ತೆ ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಸಾಕ್ಷಾಧಾರಗಳನ್ನು ಪರಿಶೀಲಿಸಿ ನಟ ಶರತ್ ಕುಮಾರ್ ದಂಪತಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ವಿಷಯದ ಕುರಿತು ಹೆಚ್ಚಿನ ವಿವರಗಳು ಇನ್ನೂ ತಿಳಿದುಬಂದಿಲ್ಲ.