ಹರಪನಹಳ್ಳಿ : ರಾಜ್ಯದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಗೊಳಿಸುವ ಬಗ್ಗೆ ಕೇಂದ್ರದ ಪ್ರಸ್ತಾವನೆಗೆ ಉತ್ತರಿಸಲು ಇಂದು ಕೊನೆಯದಿವಾಗಿದ್ದು, ಇದಕ್ಕೆ ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಎಂದು ಒತ್ತಾಯಿಸಿ ವಿದ್ಯುತ್ ಸರಬರಾಜು ಕಂಪನಿಗಳ ನೌಕರರು, ಅಧಿಕಾರಿಗಳು ಪ್ರತಿಭಟನೆಗೆ ಕರೆ ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಇಂದು ಹರಪನಹಳ್ಳಿಯಲ್ಲಿ ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ ನೌಕರರು ಹಾಗು ಕೆಪಿಟಿಸಿಎಲ್ ನೌಕರರು 2003 ಮತ್ತು 2020 ರ ವಿದ್ಯುತ್ ಪ್ರಾಸ್ತಾವಿಕ ತಿದ್ದುಪಡಿ ಬೇಡ ಎಂದು ವಿರೋಧಿಸಿ ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಖಾಸಗೀಕರಣ ಬೇಡವೇ ಬೇಡ ಎಂಬ ಘೋಷಣೆ ಮೂಲಕ ಹರಪನಹಳ್ಳಿ ಪ್ರಾಥಮಿಕ ಸಮಿತಿ ಸಮಸ್ತ ಅಧಿಕಾರಿಗಳು ಹಾಗು ನೌಕರರ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಇಂಜಿನಿಯರ್ ಎಸ್.ಪಂಪಾಪತಿ ಅವರು ಮಾತನಾಡಿ, ವಿದ್ಯುತ್ ಕಂಪನಿಯನ್ನು ಖಾಸಗೀಕರಣ ಮಾಡುವುದರಿಂದ ವಿದ್ಯುತ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕುಟುಂಬಗಳು ಬೀದಿಗೆ ಬರಬೇಕಾಗುತ್ತದೆ. ಮುಂದೆ ಬಂಡವಾಳ ಶಾಹಿಗಳು ಈಗ ಬಡವರಿಗೆ ಸಿಗುತ್ತಿರುವ ಕುಟೀರ ಜ್ಯೋತಿ ಮತ್ತು ಭಾಗ್ಯ ಜ್ಯೋತಿ ಉಚಿತ ವಿದ್ಯುತ್ ಕಡಿತಗೊಳಿಸಬಹುದು. ರೈತರಿಗೆ ಪಂಪ್ ಸೆಟ್ ಗಳಿಗೆ ಸಿಗುವ ಉಚಿತ ವಿದ್ಯುತ್ ಕಡಿತಗೊಳಿಸಿ ಮುಂದೆ ಅವರು ಹೇಳುವ ದರಕ್ಕೆ ವಿದ್ಯುತ್ ಖರೀದಿಸುವ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಜನಸಾಮಾನ್ಯರು ಎಚ್ಛೆತ್ತುಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಎಸ್. ಭೀಮಪ್ಪ ಮಾತನಾಡಿ, ನೌಕರರ ಹಿತಕಾಯಲು ಸರ್ಕಾರ ಮುಂದಾಗಬೇಕು. ರಾಜ್ಯದಲ್ಲಿ ವಿದ್ಯುತ್ ಕಂಪನಿಗಳ ಖಾಸಗೀಕರಣಗೊಳಿಸುವುದರಿಂದ ನಾಡಿನ ಜನರಿಗೆ ಹಾಗೂ ವಿದ್ಯುತ್ ಸಂಸ್ಥೆಯ ನೌಕರರಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಬಾರದು ಎಂದು ಒತ್ತಾಯಿಸಿದರು.
ಹರಪನಹಳ್ಳಿ ಪ್ರಾಥಮಿಕ ಸಮಿತಿ ಸಮಸ್ತ ಅಧಿಕಾರಿಗಳು ಹಾಗು ನೌಕರರ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಎಸ್. ಭೀಮಪ್ಪ, ಇಂಜಿನಿಯರ್ ಗಳಾದ ಎಸ್.ಪಂಪಾಪತಿ, ಪಿ. ಪ್ರಕಾಶ್, ಕೆ.ಮಾರುತೇಶ್, ವಿನಯ್ ಎಚ್.ಕೆ ಸೇರಿದಂತೆ ಕಂದಾಯ ವಿಭಾಗದ ನೌಕರರು, ಲೈನ್ ಮ್ಯಾನ್ ಗಳು, ಕೆಪಿಟಿಸಿಎಲ್ ನೌಕರರು ಪಾಲ್ಗೊಂಡಿದ್ದರು.