ಶಿರಸಿ: ಶಿರಸಿ ನಗರ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಆನೆಗಳ ಹಿಂಡು ಕೊನೆಗೂ ಬನವಾಸಿ ಕಾಡಿನತ್ತ ಪಯಣ ಬೆಳೆಸಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸತತ ಪ್ರಯತ್ನ ಮಾಡಿ ಆನೆಗಳ ಹಿಂಡನ್ನು ಜನವಸತಿ ಪ್ರದೇಶದಿಂದ ದೂರ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ಮೊದಲ ಬಾರಿಗೆ ಶಿರಸಿ ನಗರ ವ್ಯಾಪ್ತಿಯಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಬನವಾಸಿ ರಸ್ತೆಯ ಪೆಡಂಬೈಲ್ ಸಮೀಪದ ತೋಟಗಾರಿಕಾ ಕಾಲೇಜಿನ ಹಿಂಭಾಗದಲ್ಲಿರುವ ತವರುಮನೆ ತೋಟಕ್ಕೆ ಲಗ್ಗೆ ಇಟ್ಟಿದ್ದವು. ಈ ಹಿನ್ನಲೆ ಡಿಎಫ್ಓ ಡಾ.ಅಜ್ಜಯ್ಯ ನೇತೃತ್ವದಲ್ಲಿ ಆನೆಗಳನ್ನು ಕಾಡಿಗೆ ಓಡಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಆನೆಗಳು ನಗರದತ್ತ ನುಗ್ಗುವ ಸಾಧ್ಯತೆಯಿದ್ದ ಹಿನ್ನಲೆ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿಯಿಡೀ ಗಸ್ತು ಹಾಕಿ ಆನೆಗಳ ಹಿಂಡಿನ ಮೇಲೆ ನಿಗಾ ಇರಿಸಿದ್ದರು. ಕೊನೆಗೂ ಭಾನುವಾರ ಸಂಜೆ ವೇಳೆಗೆ ಆನೆಗಳ ಹಿಂಡು ತೆರಕನಳ್ಳಿ ಕಾಡಿನತ್ತ ಮುಖಮಾಡಿದ್ದು, ಕೆರೆಕೈ, ಗಡಿಹಳ್ಳಿ ಮೂಲಕ ಬನವಾಸಿ ಅರಣ್ಯ ವ್ಯಾಪ್ತಿಯತ್ತ ಮುಖಮಾಡಿವೆ. ಇದರೊಂದಿಗೆ ಶಿರಸಿ ಜನತೆ ಆನೆಗಳ ಆತಂಕದಿಂದ ನಿಟ್ಟುಸಿರು ಬಿಟ್ಟಿದ್ದಾರೆ.