ಬೆಂಗಳೂರು: ಎಲ್ಲರೂ ಏಕಪತ್ನೀ ವ್ರತಸ್ಥರೇ, 225 ಶಾಸಕರ ಬಗ್ಗೆಯೂ ತನಿಖೆಯಾಗಲಿ ಎಂದ ಆರೋಗ್ಯ ಸಚಿವ ಸುಧಾಕರ್ ಹೇಳಿಕೆಗೆ, ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಈ ಕುರಿತು ಡಿಕೆ ಶಿವಕುಮಾರ್ ಅವರು, ‘ಸುಧಾಕರ್ ಹೇಳಿರುವುದು ಬಹಳ ಸಂತೋಷ. ಎಲ್ಲರ ಬಗ್ಗೆಯೂ ತನಿಖೆ ಆಗಲಿ. ನೋಡ್ರಪ್ಪಾ ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ’ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಬಗ್ಗೆ ಇಲ್ಲಿ ಮಾತನಾಡಲ್ಲ. ಸದನದಲ್ಲಿ ಮಾತನಾಡುತ್ತೇನೆ. ನಮ್ಮ ನಾಯಕರೊಂದಿಗೆ ಚರ್ಚಿಸುತ್ತೇನೆ’ ಎಂದಿದ್ದಾರೆ.
ಸಚಿವ ಸುಧಾಕರ್ ಹೇಳಿದ್ದೇನು..?
ಇನ್ನು ಅರೋಗ್ಯ ಸಚಿವ ಸುಧಾಕರ್ ಅವರು ಯಾರು ಯಾರು ಸಿಎಂ ಆಗಿದ್ದಾಗ ಏನೇನು ಮಾಡಿದ್ದಾರೆಂಬುದು ತನಿಖೆಯಾಗಲಿ ಎಂದು ಆಗ್ರಹಿಸಿದ್ದು, ವಿಧಾನಸಭೆಯಲ್ಲಿರುವ 225 ಜನಪ್ರತಿನಿಧಿಗಳ ಬಗ್ಗೆಯೂ ತನಿಖೆ ಮಾಡಿಸಲಿ. ಯಾರು ಏನು ಮಾಡಿದ್ದಾರೆಂಬುದು ಜನರಿಗೆ ಗೊತ್ತಾಗಲಿ. ಈಗ ಇವರೆಲ್ಲ ಸತ್ಯ ಹರಿಶ್ಚಂದ್ರರಂತೆ ಮಾತನಾಡುತ್ತಿದ್ದಾರೆ. ತನಿಖೆ ನಡೆದರೆ ಎಲ್ಲವೂ ಗೊತ್ತಾಗಲಿದೆ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.