ದಾವಣಗೆರೆ ಸೆ.23: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಸಾಲ ಸೌಲಭ್ಯ ವಿತರಿಸುವ ಕಾರ್ಯಕ್ರಮ ಸೆ.22 ರ ಬುಧವಾರದಂದು ನೆರವೇರಿತು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಸೌಲಭ್ಯ ಪಡೆದ ಫಲಾನುಭವಿಗಳಿಗೆ ನಿಗಮದ ಪಾಸ್ ಪುಸ್ತಕ ಮತ್ತು ಚೆಕ್‍ಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಹುಸೇನ್ ಪಠಾಣ್ ಅಧ್ಯಕ್ಷತೆ ವಹಿಸಿದ್ದರು. ಗೌತಮ ಕುಮಾರ್ ಜೈನ್ ಅವರು ನಿಗಮದ ಮೈಕ್ರೋ ವೈಯಕ್ತಿಕ ಸಾಲ ಸೌಲಭ್ಯ ಪಡೆದ ಮಹಿಳೆಯರಿಗೆ ಪಾಸ್ ಪುಸ್ತಕ, ಗಂಗಾ ಕಲ್ಯಾಣ ಯೋಜನೆಯಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ನಿಗಮದಿಂದ ಬಿಡುಗಡೆಯಾಗುವ ಹಣದ ಚೆಕ್ ವಿತರಿಸಿದರು. ಟ್ಯಾಕ್ಸಿ ಅಥವಾ ಗೂಡ್ಸ್ ವಾಹನ ಖರೀದಿ ಯೋಜನೆಯ ಫಲಾನುಭವಿಗಳಿಗೆ ಗೂಡ್ಸ್ ವಾಹನಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ಸಲೀಂ ಪಾಷಾ, ಆಶ್ರಯ ಸ್ಥಾಯಿ ಸಮಿತಿಯ ಸದಸ್ಯ ಮುಖ್ತಾರ್, ಅಬ್ದುಲ್ ಮಜೀದ್, ಜಿಲ್ಲಾ ವಕ್ಫ್ ಸಲಾಹಾ ಸಮಿತಿಯ ಮಾಜಿ ಅಧ್ಯಕ್ಷ ಶಮೀರ್ ಆಲಂ ಮತ್ತಿತರರು ಉಪಸ್ಥಿತರಿದ್ದರು.