ಬೆಂಗಳೂರು: ನಾಗರೀಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧದ ದೂರು ಹಿಂಪಡೆಯಲು ನಿರ್ಧರಿಸಿದ್ದಾರೆ. ಹೌದು, ತಮ್ಮ ಪರ ವಕೀಲರ ಸಲಹೆ ಮೇರೆಗೆ ದಿನೇಶ್ ಕಲ್ಲಹಳ್ಳಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಮಾ.2ರಂದು ಬೆಂಗಳೂರು ಮಹಾನಗರದ ಪೊಲೀಸ್ ಆಯುಕ್ತರು & ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋ ಹಸ್ತಾಂತರಿಸಿ, ಶಾಸಕರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನೊಂದ ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕೆಂದು ದೂರು ನೀಡಿದ್ದರು.
ನಮ್ಮ ಕಕ್ಷಿದಾರರು ಒತ್ತಡಕ್ಕೆ ಮಣಿಯಲ್ಲ: ಕುಮಾರ್ ಪಾಟೀಲ್
ಇನ್ನು ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಅವರ ಪರ ವಕೀಲ ಕುಮಾರ್ ಪಾಟೀಲ್ ಅವರು ಇಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಎದುರು ಇಂದು ಮಾತನಾಡಿದ್ದಾರೆ.
ನಮ್ಮ ಕಕ್ಷಿದಾರರು ಯಾವುದಕ್ಕೂ ಬಗ್ಗುವಂತಹ ವ್ಯಕ್ತಿಯಲ್ಲ. ಅವರು ಯಾವುದೇ ಒತ್ತಡಗಳಿಗೂ ಮಣಿಯುವುದಿಲ್ಲ. ಇದು ಕ್ರಿಮಿನಲ್ ಪ್ರಕರಣ ಆಗಿರುವ ಹಿನ್ನೆಲೆಯಲ್ಲಿ ಪೊಲೀಸರು ದೂರುದಾರರಿಗೆ ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಆದರೆ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಅವರು ತಮ್ಮ ದೂರನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.