ಅಬುದಾಬಿ: ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್ ಗಳ ಗೆಲುವು ದಾಖಲಿಸಿದೆ. ಈ ಗೆಲುವಿನಿಂದ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ 2 ನೇ ಸ್ಥಾನಕ್ಕೇರಿದ್ದು, ಸೋತರು ಮೂರನೇ ಸ್ಥಾನವನ್ನು ಪಡೆದುಕೊಂಡಿರುವ ಆರ್ ಸಿಬಿ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 153 ರನ್ ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19 ಓವರ್ ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿ 6 ವಿಕೆಟ್ ಗಳ ಗೆಲುವು ದಾಖಲಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಶಿಖರ್ ದವನ್-54, ಅಜಿಂಕ್ಯ ರಹಾನೆ – 60, ಸ್ಟೋನಿಸ್ – 10* ರನ್ ಗಳಿಸಿದರು. ಆರ್ ಸಿಬಿ ಪರ ಶಾಬಾಜ್ ಅಹಮದ್ 2, ಸುಂದರ್ ಹಾಗು ಸಿರಾಜ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು. ಆರ್ ಸಿಬಿ ಪರ ದೇವದತ್ ಪಡಿಕ್ಕಲ್-50, ವಿರಾಟ್ ಕೊಹ್ಲಿ -28, ಡಿವಿಲಿಯರ್ಸ್ -35 ಹಾಗು ಶಿವಂ ದುಬೆ-17 ರನ್ ಗಳಿಸಿದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪರ ಎನ್ರಿಚ್ ನೊರ್ಟ್ಜೆ 3 ವಿಕೆಟ್, ಕಗಿಸೊ ರಬಾಡ 2, ಹಾಗು ಅಶ್ವಿನ್ 1 ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಅದ್ಬುತ ಬೌಲಿಂಗ್ ಪ್ರದರ್ಶನ ನೀಡಿ ಪ್ರಮುಖ ಮೂರು ವಿಕೆಟ್ ಪಡೆದ ಎನ್ರಿಚ್ ನೊರ್ಟ್ಜೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಇಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಸನ್ ರೈಸರ್ಸ್ ತಂಡಕ್ಕೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.
ಈಗಾಗಲೇ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ತಂಡಕ್ಕೆ ಈ ಪಂದ್ಯ ಔಪಚಾರಿಕ ಪಂದ್ಯವಾಗಿದ್ದು, ಸನ್ ರೈಸರ್ಸ್ ಗೆ ಈ ಪಂದ್ಯ ಮುಖ್ಯವಾಗಿದ್ದು, ಗೆದ್ದರೆ ರನ್ ರೇಟ್ ಆಧಾರದಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ಎಂಟ್ರಿಕೊಡಲಿದೆ. ಸೋತರೆ ಪಾಯಿಂಟ್ ಆಧಾರದಲ್ಲಿ ಕೆಕೆಆರ್ ತಂಡ ಪ್ಲೇ ಆಫ್ ಎಂಟ್ರಿ ಕೊಡಲಿದೆ.