ಶಾರ್ಜಾ: ಐಪಿಎಲ್ -2020 ರ 13 ಆವೃತ್ತಿಯಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
228 ರನ್ ಬೃಹತ್ ಗುರಿಯನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟದೊಂದಿಗೆ 210 ರನ್ ಗಳಿಸಿ ಸೋಲಿಗೆ ಶರಣಾಯಿತು. ನೈಟ್ ರೈಡರ್ಸ್ ಪರ, ಗಿಲ್-28, ನಿತೀಶ್ ರಾಣಾ -58, ಮಾರ್ಗನ್-44, ರಾಹುಲ್ ತ್ರಿಪಾಠಿ-36 ರನ್ ಕಲೆಹಾಕಿದ್ದು, ಇವರ ದಿಟ್ಟ ಹೋರಾಟದ ನಡುವೆಯೂ ತಂಡ 18 ರನ್ ಸೋಲನುಭವಿಸಿತು. ಡೆಲ್ಲಿ ಪರ, ಎನ್ರಿಚ್ ನೊರ್ಟ್ಜೆ 3, ಹರ್ಷಲ್ ಪಟೇಲ್-2, ರಬಾದ, ಸ್ಟೋನಿಸ್, ಮಿಶ್ರ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಆಟಗಾರ ಪೃಥ್ವಿ ಷಾ-66, ಶಿಖರ್ ಧವನ್-26, ರಿಷಬ್ ಪಂತ್-38, ಹಾಗೂ ನಾಯಕ ಶ್ರೇಯಸ್ ಅಯ್ಯರ್-88 ಅವರ ಭರ್ಜರಿ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 228 ರನ್ ಗಳಿಸಿತು. ಕೊಲ್ಕತ್ತಾ ಪರ, ರಸೆಲ್ 2, ನಾಗರಕೋಟಿ, ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ 88 ರನ್ ಗಳ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ನಾಯಕ ಶ್ರೇಯಸ್ ಅಯ್ಯರ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.