ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲಿ ಶೇ.50ರಷ್ಟ ಮಾತ್ರವೇ ಕುಳಿತು ಸಿನಿಮಾ ನೋಡಲು ಪ್ರೇಕ್ಷಕರಿಗೆ ಅವಕಾಶ ನೀಡಬೇಕೆಂದು ಆದೇಶಿಸಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ನಟ ದ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್ ವುಡ್ ಅನೇಕ ಚಿತ್ರನಟರು ಕಿಡಿಕಾರಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಅರೋಗ್ಯ ಸಚಿವ ಕೆ ಸುಧಾಕರ್ ಅವರು ಚಿತ್ರಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವ ಕುರಿತು ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೆ ಸುಧಾಕರ್ ಅವರು, ಕೊರೊನಾ ಬಿಕ್ಕಟ್ಟಿನಿಂದ ಉಂಟಾದ ಲಾಕ್ ಡೌನ್ ಮತ್ತು ನಂತರ ದಿನಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧಗಳಿಂದ ನಷ್ಟ ಅನುಭವಿಸಿದ ಕ್ಷೇತ್ರಗಳಲ್ಲಿ ಚಿತ್ರರಂಗವೂ ಒಂದು ಎಂಬ ಅರಿವಿದೆ. ಚಿತ್ರರಂಗ ಜನರಿಗೆ ಮನರಂಜನೆ ನೀಡುವುದಷ್ಟೇ ಅಲ್ಲದೆ, ಸಾವಿರಾರು ಜನರಿಗೆ ಜೀವನೋಪಾಯ ಒದಗಿಸಿರುವ ಉದ್ಯಮವೂ ಹೌದು.
ನಾಡಿನ ಸಮಸ್ತ ಜನರ ಆರೋಗ್ಯ ಮತ್ತು ಚಿತ್ರೋದ್ಯಮದ ಒಳಿತು ಎರಡನ್ನೂ ಗಮನದಲ್ಲಿಟ್ಟುಕೊಂಡು ತಜ್ಞ ವೈದ್ಯರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಚಿತ್ರಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವ ಕುರಿತು ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡುತ್ತಿದ್ದೇನೆ ಎಂದು ಅರೋಗ್ಯ ಸಚಿವ ಕೆ ಸುಧಾಕರ್ ಅವರು ಹೇಳಿದ್ದಾರೆ.
ಕೊರೊನಾ ಬಿಕ್ಕಟ್ಟಿನಿಂದ ಉಂಟಾದ ಲಾಕ್ ಡೌನ್ ಮತ್ತು ನಂತರ ದಿನಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧಗಳಿಂದ ನಷ್ಟ ಅನುಭವಿಸಿದ ಕ್ಷೇತ್ರಗಳಲ್ಲಿ ಚಿತ್ರರಂಗವೂ ಒಂದು ಎಂಬ ಅರಿವಿದೆ. ಚಿತ್ರರಂಗ ಜನರಿಗೆ ಮನರಂಜನೆ ನೀಡುವುದಷ್ಟೇ ಅಲ್ಲದೆ, ಸಾವಿರಾರು ಜನರಿಗೆ ಜೀವನೋಪಾಯ ಒದಗಿಸಿರುವ ಉದ್ಯಮವೂ ಹೌದು. (1/2)
— Dr Sudhakar K (@mla_sudhakar) February 3, 2021




