ದಾವಣಗೆರೆ: ಮಾನವ ಸಹೋದರನಿಗೆ ಕೊಟ್ಟಿದ್ದ ಸಾಲವನ್ನು ಹಿಂಪಡೆಯಲು ಅಳಿಯನೊಬ್ಬ ಐನಾತಿ ಐಡಿಯಾ ಮಾಡಿ ಸಿಕ್ಕಿಬಿದ್ದಿದ್ದಾನೆ. ಮಾವನಿಗೆ ತಾನೇ ಇನ್ಶುರೆನ್ಸ್ ಮಾಡಿಸಿ, 40 ಲಕ್ಷ ಹೊಡೆಯಲು ಆತನೇ ಮಾವನ ಹತ್ಯೆ ಮಾಡಿ ಇದೀಗ ಜೈಲುಪಾಲಾಗಿದ್ದಾನೆ. ದಾವಣಗೆರೆಯಲ್ಲಿ ಈ ಘಟನೆ ನಡೆದಿದ್ದು ದುಗ್ಗೇಶ್(32) ಹತ್ಯೆಗೊಳಗಾದ ಮಾವನಾಗಿದ್ದರೆ, ಅಳಿಯ ಗಣೇಶ್ ಸೇರಿ ನಾಲ್ವರು ಆರೋಪಿಗಳು ಇದೀಗ ಜೈಲುಪಾಲಾಗಿದ್ದಾರೆ.
ಹತ್ಯೆಗೊಳಗಾದ ದಾವಣಗೆರೆ ನಿವಾಸಿ ದುಗ್ಗೇಶ ಹಣ್ಣಿನ ವ್ಯಾಪಾರಿಯಾಗಿದ್ದು, ಹತ್ಯೆಗೈದ ಅಳಿಯ ಗಣೇಶ ಆಟೋ ಚಾಲಕನಾಗಿದ್ದ. ದುಗ್ಗೇಶನ ಸಹೋದರ ಗೋಪಿ ಎಂಬಾತನಿಗೆ ಗಣೇಶ ಬಡ್ಡಿ ಸಾಲವಾಗಿ 1 ಲಕ್ಷ ರೂಪಾಯಿ ನೀಡಿದ್ದು, ಸಾಲ ಪಡೆದಾತ ಹಣ ವಾಪಾಸ್ ಮಾಡದೇ ತಲೆಮರೆಸಿಕೊಂಡಿದ್ದ. ಮಾವ ದುಗ್ಗೇಶ್ ಜೊತೆ ಗೋಪಿ ಆತ್ಮೀಯವಾಗಿದ್ದ ವಿಚಾರ ತಿಳಿದಿದ್ದ ಗಣೇಶ, ಸಾಲದ ಹಣ ವಾಪಸ್ ಮಾಡಲು ಸಹೋದರನಿಗೆ ತಿಳಿಸುವಂತೆ ಮಾವನ ಬಳಿ ಸಾಕಷ್ಟು ಬಾರಿ ಹೇಳಿದ್ದ. ಆದರೆ ಅಷ್ಟಾದರೂ ಹಣ ಮಾತ್ರ ವಾಪಸ್ ಬಂದಿರಲಿಲ್ಲ.
ಈ ಹಿನ್ನಲೆ ಹಣ ಕಳೆದುಕೊಳ್ಳಲು ತಯಾರಿಲ್ಲದ ಗಣೇಶ ಕ್ರಿಮಿನಲ್ ಐಡಿಯಾ ಒಂದನ್ನ ಮಾಡಿದ್ದ. ಕುಡುಕನಾಗಿದ್ದ ಮಾವನಿಗೆ 40 ಲಕ್ಷ ರೂಪಾಯಿಯ ಇನ್ಶುರೆನ್ಸ್ ಮಾಡಿಸಿ, ಅದಕ್ಕೆ ತನ್ನನ್ನೇ ನಾಮಿನಿ ಮಾಡಿಕೊಂಡಿದ್ದು, ಬ್ಯಾಂಕ್ ಪಾಸ್‌ಬುಕ್, ಚೆಕ್‌ಬುಕ್ ಎಲ್ಲವನ್ನೂ ತನ್ನ ಬಳಿಯೇ ಇರಿಸಿಕೊಂಡಿದ್ದ. ಬಳಿಕ ಹಣದ ಆಸೆ ತೋರಿಸಿ ತನ್ನ ಸ್ನೇಹಿತರಾದ ಅನಿಲ್, ಮಾರುತಿ ಹಾಗೂ ಶಿವಕುಮಾರ ಜೊತೆ ಸೇರಿ ಮಾವನನ್ನೇ ಹತ್ಯೆಗೈದಿದ್ದ. ಬಳಿಕ ತನಗೆ ಗೊತ್ತಿಲ್ಲ ಎನ್ನುವಂತೆ ಮಾವನ ಶವವನ್ನು ಮನೆಗೆ ತಂದು ಹಾಕಿದ್ದ.
ಇನ್ಶುರೆನ್ಸ್ ಹಣ ಸಿಗುವ ಆಸೆಯಲ್ಲಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದು, ಪ್ರಕರಣವನ್ನು ಭೇದಿಸಿ ಆರೋಪಿಗಳ ಹಡೆಮುರಿಕಟ್ಟಿದ್ದಾರೆ. ಆಜಾದ್ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.