ಚಂಡೀಗಢ: ಭಾನುವಾರ ಪಂಜಾಬ್ ಪೊಲೀಸರು ಕೈಗೊಂಡ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಗಡಿಯಾಚೆಯಿಂದ ನಡೆಯುತ್ತಿದ್ದ ಮಾದಕ ವಸ್ತುಗಳ ಕಳ್ಳಸಾಗಣಿಕೆ ಪ್ರಕರಣವನ್ನು ಭೇದಿಸಿದ್ದು, ಬರೋಬ್ಬರಿ 105 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನ-ಪಂಜಾಬ್ ಗಡಿ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮಾದಕ ವಸ್ತುಗಳ ಕಳ್ಳಸಾಗಣೆ ಮೇಲೆ ಹದ್ದಿನ ಕಣ್ಣಿರಿಸಿದ್ದ ಪೊಲೀಸರು ಭಾರೀ ಪ್ರಮಾಣದ ಹೆರಾಯಿನ್ ಜೊತೆ ವಿದೇಶ ಮೂಲದ ಮಾದಕವಸ್ತು ಕಳ್ಳಸಾಗಣೆದಾರರಿಬ್ಬರನ್ನು ಸಹ ವಶಪಡಿಸಿಕೊಂಡಿದ್ದಾರೆ.
ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಾತನಾಡಿ, ಪಾಕಿಸ್ತಾನದಿಂದ ಡ್ರಗ್ಸ್ ಸಾಗಿಸಲು ನೀರಿನ ಮಾರ್ಗವನ್ನು ಬಳಸಲಾಗುತ್ತಿತ್ತು. ಮತ್ತು ಟೈರ್‌ಗಳ ದೊಡ್ಡ ರಬ್ಬರ್ ಟ್ಯೂಬ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಮತ್ತು ಐದು ವಿದೇಶಿ ನಿರ್ಮಿತ ಮತ್ತು ಒಂದು ದೇಶ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಪಂಜಾಬ್‌ನಲ್ಲೇ ಅತೀ ದೊಡ್ಡ ಹೆರಾಯಿನ್ ಕಳ್ಳಸಾಗಣೆ ಪ್ರಕರಣ: ಗುಪ್ತಚರ-ನೇತೃತ್ವದ ಕಾರ್ಯಾಚರಣೆಯಲ್ಲಿ, ಪಂಜಾಬ್ ಪೊಲೀಸರು ಗಡಿಯಾಚೆಗಿನ ಕಳ್ಳಸಾಗಣೆ ರ್ಯಾಕೆಟ್ ಅನ್ನು ಭೇದಿಸಿದ್ದಾರೆ. ಈ ವೇಳೆ ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರ ನವಪ್ರೀತ್ ಸಿಂಗ್ ಅಲಿಯಾಸ್ ನವ್ ಭುಲ್ಲರ್‌ನ ಸಹಚರರಾದ ನವಜೋತ್ ಸಿಂಗ್ ಮತ್ತು ಲವ್‌ಪ್ರೀತ್ ಕುಮಾರ್‌ನನ್ನು ಬಂಧಿಸಲಾಗಿದೆ. ಹಾಗೂ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 105 ಕೆಜಿ ಹೆರಾಯಿನ್, 31.93 ಕೆಜಿ ಕೆಫೀನ್ ಅನ್‌ಹೈಡ್ರಸ್, 17 ಕೆಜಿ ಡಿಎಂಆರ್, 5 ವಿದೇಶಿ ನಿರ್ಮಿತ ಪಿಸ್ತೂಲ್‌ಗಳು ಮತ್ತು 1 ದೇಸಿ ಪಿಸ್ತೂಲ್‌ನ್ನು ವಶಪಡಿಸಿಕೊಂಡಿದ್ದಾಗಿ ಪೊಲೀಸ್ ಅಧಿಕಾರಿ ಯಾದವ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದಿಂದ ಡ್ರಗ್ಸ್ ಸಾಗಿಸಲು ಜಲಮಾರ್ಗವನ್ನು ಬಳಸುತ್ತಿದ್ದ ಕುರಿತು ಸಾಕ್ಷ್ಯಗಳು ಲಭಿಸಿವೆ. ದಾಳಿ ವೇಳೆ ಟೈರ್‌ಗಳ ದೊಡ್ಡ ರಬ್ಬರ್ ಟ್ಯೂಬ್‌ಗಳು ಪತ್ತೆಯಾಗಿದ್ದು, ಇದು ಮಾದಕವಸ್ತುಗಳನ್ನು ನೀರಿನ ಮೂಲಕ ಕಳ್ಳಸಾಗಣೆ ಮಾಡಲಾಗಿದೆ ಎಂದು ಸೂಚಿಸುತ್ತದೆ ಎಂದು ಅವರು ಹೇಳಿದರು. ಡ್ರಗ್ ಕಾರ್ಟೆಲ್‌ನಲ್ಲಿ ಭಾಗಿಯಾಗಿರುವ ಇನ್ನಷ್ಟು ಅಪರಾಧಿಗಳನ್ನು ಬಂಧಿಸಲು ಉಳಿದ ಲಿಂಕ್‌ಗಳ ಸಂಪರ್ಕವನ್ನು ಸಾಧಿಸಲು ತನಿಖೆ ನಡೆಯುತ್ತಿದೆ ಎಂದು ಡಿಜಿಪಿ ಹೇಳಿದರು.