ನವದೆಹಲಿ:ಅಡುಗೆ ಅನಿಲ ಅಥವಾ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50 ರೂ. ಹೆಚ್ಚಿಸಲಾಗಿದೆ ಎಂದು ಕೇಂದ್ರ ತೈಲ ಸಚಿವ ಹರ್‌ದೀಪ್ ಸಿಂಗ್ ಪುರಿ ಸೋಮವಾರ ತಿಳಿಸಿದ್ದಾರೆ. ಸಬ್ಸಿಡಿ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಬೆಲೆಯನ್ನು ಹೆಚ್ಚಿಸಲಾಗಿದೆ.
“ಉಜ್ವಲ ಅಡಿಯಲ್ಲಿ 14.2 ಕೆಜಿ ಎಲ್‌ಪಿಜಿ ಬೆಲೆ 500 ರಿಂದ 550 ಕ್ಕೆ ಮತ್ತು ಉಜ್ವಲೇತರ ಬಳಕೆದಾರರಿಗೆ 803 ರಿಂದ 853 ಕ್ಕೆ ಹೆಚ್ಚಾಗಲಿದೆ” ಎಂದು ಶ್ರೀ ಪುರಿ ಹೇಳಿದರು.
ಕಳೆದ ವಾರ, ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 41 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು. ಬೆಲೆ ಪರಿಷ್ಕರಣೆಯು ದೈನಂದಿನ ಕಾರ್ಯಾಚರಣೆಗಳಿಗೆ ಈ ಸಿಲಿಂಡರ್‌ಗಳನ್ನು ಬಳಸುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳ ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ಪರಿಣಾಮವನ್ನು ಬೀರಿತ್ತು.
ಇಂದು ಮುಂಜಾನೆ, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದು ಆದಾಗ್ಯೂ, ಈ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದಿಲ್ಲ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಭರಿಸುತ್ತವೆ ಎಂದು ಹೇಳಿದ್ದರು.
ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 13 ರೂ.ಗೆ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ.ಗೆ ಹೆಚ್ಚಿಸಲಾಗಿದೆ ಎಂದು ಅಧಿಕೃತವಾಗಿ ಆದೇಶಿಸಲಾಗಿದೆ.
ಸುಂಕಗಳ ಹೆಚ್ಚಳವು “ಏಪ್ರಿಲ್ 8, 2025 ರಿಂದ ಜಾರಿಗೆ ಬರಲಿದೆ” ಎಂದು ಹೇಳಲಾಗಿದೆ.