ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಾಸ್ ಪೇಟೆಯ ಸಮೀಪ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಒಂದೇ ಕುಟುಂಬದ ಆರು ಜನರ ಅಂತ್ಯಕ್ರಿಯೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತಾ ತಾಲೂಕಿನ ಮೊರಬಗಿಯಲ್ಲಿ ನೆರವೇರಿಸಲಾಗಿದೆ.
ಉದ್ಯಮಿ ಚಂದ್ರಮ್ ಏಗಪ್ಪಗೋಳ(48), ಪತ್ನಿ ಗೌರಾಬಾಯಿ(42), ಪುತ್ರ ಜಾನ್(16), ಪುತ್ರಿ ದೀಕ್ಷಾ(12), ಚಂದ್ರಶೇಖರ ಅವರ ಸಹೋದರನ ಪತ್ನಿ ವಿಜಯಲಕ್ಷ್ಮಿ(36), ಅವರ ಪುತ್ರ ಆರ್ಯ(6) ಮೃತಪಟ್ಟವರು.
ಐಟಿ ಉದ್ಯಮಿಯಾಗಿದ್ದ ಚಂದ್ರಮ್ ಬೆಂಗಳೂರಿನ ಹೆಚ್‌ಎಸ್‌ಆರ್ ಬಡಾವಣೆಯಲ್ಲಿ ವಾಸವಾಗಿದ್ದರು. ತಂದೆಯ ಆರೋಗ್ಯ ವಿಚಾರಿಸಲು ಮತ್ತು ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಕುಟುಂಬದವರೊಂದಿಗೆ ಊರಿಗೆ ಹೊರಟಿದ್ದ ವೇಳೆ 50 ಟನ್ ತೂಕದ ಕಂಟೇನರ್ ಕಾರ್ ಮೇಲೆ ಉರಳಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೃತ ದೇಹಗಳನ್ನು ಮೊರಬಗಿ ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಲಿಂಗಾಯಿತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಚಂದ್ರಮ್ ಅವರ ಸಹೋದರ ಮಲ್ಲಿನಾಥ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಇಡೀ ಗ್ರಾಮದ ಜನ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅಪಾರ ಸಂಖ್ಯೆಯ ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.