ಬೆಂಗಳೂರು: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಕವಿ ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟರು(೮೫) ಇಂದು ನಿಧನರಾಗಿದ್ದು, ಅವರ ನಿಧನಕ್ಕೆ ಹಾಲಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ.
ಲಕ್ಷ್ಮೀ ನಾರಾಯಣ ಭಟ್ಟರ ನಿಧನಕ್ಕೆ ಸಿಎಂ ಸಂತಾಪ:
ಲಕ್ಷ್ಮೀ ನಾರಾಯಣ ಭಟ್ಟರ ನಿಧನಕ್ಕೆ ಸಿಎಂ ಬಿಎಸ್‌ವೈ ತೀವ್ರ ಸಂತಾಪ ಸೂಚಿಸಿದ್ದು, ‘ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಭಾವಗೀತೆ, ಸಾಹಿತ್ಯ ವಿಮರ್ಶೆ, ನವ್ಯಕವಿತೆ, ಅನುವಾದ, ಮಕ್ಕಳಿಗಾಗಿ ಗೀತೆಗಳ ರಚನೆ ಮುಂತಾದ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿ ಕನ್ನಡಿಗರ ಮನೆ ಮಾತಾಗಿದ್ದ, ಅವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರದ ತಾರೆಯೊಂದು ಕಳಚಿದಂತಾಗಿದೆ. ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಖ್ಯಾತ ಕವಿ ನಿಧನಕ್ಕೆ ಮಾಜಿ ಸಿಎಂ ಸಂತಾಪ:
ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ಕವಿ ಎನ್.ಎಸ್ ಲಕ್ಷ್ಮಿನಾರಾಯಣ ಭಟ್ ನಿಧನರಕ್ಕೆ ಸಂತಾಪ ಸೂಚಿಸಿದ್ದು, ‘ಕನ್ನಡ ಸಾಹಿತ್ಯ ಲೋಕದ ಮಹತ್ವ ಕವಿ, ಶಿಶುಗೀತೆಕಾರರೂ, ವಿಮರ್ಶಕ, ಅನುವಾದಕರೂ ಆಗಿದ್ದ ಪ್ರೀತಿಯ ‘ಎನ್‌ಎಸ್‌ಎಲ್’ ಅವರು ಜಗದ ತಾಯಿಯ ಮಾಯೆಯ ಲೀಲೆಯೊಳಗೆ ಕರಗಿಹೋದರು. ಭಾವಗೀತೆಗಳ ಲೋಕದ ಭಾವುಕ ಕವಿ ಇನ್ನಿಲ್ಲ ಎಂಬುದು ನಾಡಿನ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಭಾವಸಾರವನ್ನೆ ಕಳೆದುಕೊಂಡಂತಾಗಿದೆ ಎಂದು ಹೇಳಿದ್ದು, ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ’ ಎಂದು ಟ್ವೀಟ್ ಮಾಡಿದ್ದಾರೆ.