ಉತ್ತರ ಪ್ರದೇಶ: ತನ್ನ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ನಿರಾಕರಿಸಿದ ಮತ್ತು ಕಾಲೇಜು ಆಡಳಿತವು ಶುಲ್ಕ ಪಾವತಿಸದ ಬಗ್ಗೆ ಅವಮಾನಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಪ್ರತಾಪ್ಗಢ ಜಿಲ್ಲೆಯ 9ನೇ ತರಗತಿಯ ವಿದ್ಯಾರ್ಥಿಯೊಬ್ಬಳು ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ತಾಯಿ ಪೂನಂ ದೇವಿ ನೀಡಿದ ದೂರಿನ ಪ್ರಕಾರ, ಕಮಲಾ ಶರಣ್ ಯಾದವ್ ಇಂಟರ್ ಕಾಲೇಜಿನ ವಿದ್ಯಾರ್ಥಿನಿ ರಿಯಾ ಪ್ರಜಾಪತಿ (17) ಗೆ 800 ರೂ. ಶುಲ್ಕ ಬಾಕಿ ಇರುವುದರಿಂದ ಪರೀಕ್ಷೆಗೆ ಪ್ರವೇಶ ಪತ್ರ ನೀಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಪರೀಕ್ಷೆಗೆ ಹಾಜರಾಗಲು ಹೋದಾಗ ತನ್ನ ಮಗಳನ್ನು ಕಾಲೇಜು ಮ್ಯಾನೇಜರ್ ಸಂತೋಷ್ ಕುಮಾರ್ ಯಾದವ್, ಪ್ರಾಂಶುಪಾಲ ರಾಜ್ಕುಮಾರ್ ಯಾದವ್, ಸಿಬ್ಬಂದಿ ದೀಪಕ್ ಸರೋಜ್, ಗುಮಾಸ್ತ ಧನಿರಾಮ್ ಮತ್ತು ಇನ್ನೂ ಗುರುತಿಸಲಾಗದ ಶಿಕ್ಷಕರಿಂದ ಅವಮಾನಿಸಲಾಗಿದೆ ಎಂದು ಆಕೆ ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಿಲ್ಲ ಮತ್ತು ಮನೆಗೆ ಮರಳುವಂತೆ ಹೇಳಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಪೂರ್ವ) ದುರ್ಗೇಶ್ ಕುಮಾರ್ ಸಿಂಗ್ ದೂರನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ಅವಮಾನದಿಂದ ಮನನೊಂದ ರಿಯಾ ಮನೆಗೆ ಮರಳಿ ಕೋಣೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಫೀ ತುಂಬದ್ದಕ್ಕೆ ಕಾಲೇಜು ಸಿಬ್ಬಂದಿ ತನ್ನ ಮಗಳ ಭವಿಷ್ಯವನ್ನು ಹಾಳುಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.