ಚಿಕ್ಕಮಗಳೂರು: ಮಂಗನ ಕಾಯಿಲೆಯಿಂದ ಬಳಲುತ್ತಿದ್ದ 65 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿಯಾಗಿದೆ.
ನರಸಿಂಹರಾಜಪುರ ತಾಲ್ಲೂಕಿನ ಕಟ್ಟಿನಮನೆ ಗ್ರಾಮದ ಮಹಿಳೆಯೊಬ್ಬರು ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ತಾಯಿ ಮತ್ತು ಮಗ ಮೇಲ್ಪಾಲ್ ಗ್ರಾಮದ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗನ ಕಾಯಿಲೆಯೊಂದಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುವಾಗ ನಿಧನರಾಗಿದ್ದಾರೆ.
ಮಂಗನ ಕಾಯಿಲೆ ಮಲೆನಾಡು ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಮಹಿಳೆ ಸಾವಿನೊಂದಿಗೆ ಈ ವರ್ಷ ಕೆಎಫ್‌ಡಿ ಮೊದಲ ಬಲಿಯನ್ನು ಪಡೆದುಕೊಂಡಿದೆ.