ಭೋಪಾಲ್: ಕರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಸಿಕ್ಕಿಲ್ಲ ಮತ್ತೊಂದೆಡೆ ಹಕ್ಕಿ ಜ್ವರ ಎಲ್ಲೆಡೆ ವಿಜ್ರುಂಬಿಸುತ್ತಿದೆ. ಕೇರಳ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಹಕ್ಕಿ ಜ್ವರ ಈಗಾಗಲೇ ತೀವ್ರ ಸ್ವರೂಪ ಪಡೆದುಕೊಂಡಿರುವುದು ತಿಳಿದ ವಿಷಯ. ಮಧ್ಯಪ್ರದೇಶದ ಮಾಂಡ್‌ಸೌರ್‌ನಲ್ಲಿ ಹಕ್ಕಿ ಜ್ವರ ಹರಡುತ್ತಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ.
ಮಧ್ಯಪ್ರದೇಶದ ಮಾಂಡ್‌ಸೌರ್ ಜಿಲ್ಲೆಯಾದ್ಯಂತ ಚಿಕನ್ ಸೆಂಟರ್ ಗಳನ್ನು 15 ದಿನಗಳ ಕಾಲ ಮುಚ್ಚುವುದಲ್ಲದೆ, ಮೊಟ್ಟೆ ಮಾರಾಟವನ್ನು ನಿಷೇಧಿಸಲಾಗಿದೆ. ಮಾಂಡ್‌ಸೌರ್ ಪ್ರದೇಶದಲ್ಲಿ ಒಂದೇ ದಿನದಲ್ಲಿ 100 ಕಾಗೆಗಳು ಸತ್ತಿದ್ದಲ್ಲದೆ, ಇಂದೋರ್ನಲ್ಲಿ ಸತ್ತ ಕಾಗೆಗಳಲ್ಲಿ ಏವಿಯನ್ ಇನ್ಫ್ಲುಯೆನ್ಸ (ಹಕ್ಕಿ ಜ್ವರ) ಕಂಡುಬಂದ ನಂತರ ಅಧಿಕಾರಿಗಳು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಪಶುಸಂಗೋಪನಾ ಸಚಿವ ಪ್ರೇಮ್ ಸಿಂಗ್ ಪಟೇಲ್ ಅವರು ಮಾತನಾಡಿ, ಇಂದೋರ್ನಲ್ಲಿ ಸತ್ತ ಕಾಗೆಗಳಲ್ಲಿ ಏವಿಯನ್ ಇನ್ಫ್ಲುಯೆನ್ಸ (ಹಕ್ಕಿ ಜ್ವರ) ಗುರುತಿಸಲಾಗಿದ್ದು, ರಾಪಿಡ್ ರೆಸ್ಪಾನ್ಸ್ ಟೀಮ್ ಕಂಟ್ರೋಲ್ ರೂಮ್ ಅನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ
2020 ರ ಡಿಸೆಂಬರ್ 23 ರಿಂದ 2021 ರ ಜನವರಿ 3 ರವರೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ 142, ಮಾಂಡ್‌ಸೌರ್‌ನಲ್ಲಿ 100, ಅಗರ್-ಮಾಲ್ವಾದಲ್ಲಿ 112, ಖಾರ್ಗೋನ್‌ನಲ್ಲಿ 13 ಮತ್ತು ಸೆಹೋರ್ ಜಿಲ್ಲೆಯಲ್ಲಿ ಒಂಬತ್ತು ಕಾಗೆಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಕೊಟ್ಟಾಯಂ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ವೈರಸ್ ಪತ್ತೆಯಾಗಿದೆ. ಪರಿಣಾಮವಾಗಿ, ಈ ಪ್ರದೇಶದಲ್ಲಿ ಈಗಾಗಲೇ 12,000 ಬಾತುಕೋಳಿಗಳು ಸಾವನ್ನಪ್ಪಿವೆ ಎಂದು ಹೇಳಲಾಗಿದ್ದು 36,000 ಬಾತುಕೋಳಿಗಳು ಅಪಾಯದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ತಾಳಿ ಕಟ್ಟುವ ಸಮಯದಲ್ಲಿ ಪರಾರಿಯಾದ ವರ; ವಧುವಿನ ಕುತ್ತಿಗೆ ತಾಳಿ ಕಟ್ಟಿದ ಮತ್ತೊಬ್ಬ ಯುವಕ