ನವದೆಹಲಿ: ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿದ್ದ ಮೊಬೈಲ್ ಸ್ಪೋಟಗೊಂಡ ಪರಿಣಾಮ ಶಾಲೆಯ ಮುಖ್ಯೋಪಾದ್ಯಾಯರೊಬ್ಬರು ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಭಂಡಾರ ಜಿಲ್ಲೆಯ ಸಕೋಲಿ ತಾಲ್ಲೂಕಿನ ಸಂಗಡಿ ಬಳಿಯ ಸಿರೆಗಾಂವ್ಟೋಲಾದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಸುರೇಶ್ ಸಂಗ್ರಾಮೆ(55) ಎಂದು ಗುರುತಿಸಲಾಗಿದೆ. ಇನ್ನೋರ್ವ ಸವಾರ ಸಹ ಗಂಭೀರ ಗಾಯಗೊಂಡಿದ್ದಾರೆ.
ಮೃತ ಸುರೇಶ್ ಸಂಗ್ರಾಮೆ ಜಿಲ್ಲಾ ಪರಿಷತ್ ಶಾಲೆಯ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಸಂಬಂಧಿ ನಾಥು ಗಾಯಕ್ವಾಡ್(56) ಎಂಬುವವರೊಂದಿಗೆ ಸಂಬಂಧಿಕರ ಕಾರ್ಯಕ್ರಮಕ್ಕಾಗಿ ಬೈಕ್‌ನಲ್ಲಿ ಅರ್ಜುನಿ ಮೊರ್ಗಾಂವ್ ಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಗಾಯಗೊಂಡ ನಾಥು ಗಾಯಕ್ವಾಡ್ ಪ್ರಸ್ತುತ ಭಂಡಾರ ಜಿಲ್ಲಾ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುರೇಶ್ ಸಂಗ್ರಾಮೆ ಅವರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡ ನಂತರ ಅವರ ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಸುಟ್ಟಗಾಯಗಳ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮೊಬೈಲ್ ಬ್ಯಾಟರಿ ಅತಿಯಾಗಿ ಬಿಸಿಯಾಗಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ತಜ್ಞರ ಪ್ರಕಾರ, ಮೊಬೈಲ್ ಫೋನ್ಗಳು ಹಲವಾರು ಕಾರಣಗಳಿಗಾಗಿ ಸ್ಫೋಟಗೊಳ್ಳಬಹುದು. ಆದಾಗ್ಯೂ, ಇದಕ್ಕೆ ಮುಖ್ಯ ಕಾರಣ ಮೊಬೈಲ್ ನ ಬ್ಯಾಟರಿ. ಫೋನ್ ಅನ್ನು ಹಲವಾರು ಗಂಟೆಗಳ ಕಾಲ ಚಾರ್ಜ್ ಮಾಡುವುದರಿಂದ ಬ್ಯಾಟರಿ ಸ್ಫೋಟಗೊಳ್ಳಬಹುದು. ಮೊಬೈಲ್ ದೀರ್ಘಕಾಲದವರೆಗೆ ಬಿಸಿಲಿನಲ್ಲಿದ್ದರೆ, ಬ್ಯಾಟರಿ ಅತಿಯಾಗಿ ಬಿಸಿಯಾಗಬಹುದು ಮತ್ತು ಸ್ಫೋಟಗೊಳ್ಳಬಹುದು ಎನ್ನಲಾಗಿದೆ.