ನವದೆಹಲಿ: ಸಾಮಾನ್ಯವಾಗಿ ದುಡ್ಡಿದ್ದವರು ಹಲ್ಲು ಹಾಳಾದಾಗ ಬೆಳ್ಳಿ ಇಲ್ಲವೇ ಬಂಗಾರದ ಹಲ್ಲು ಹಾಕಿಸಿಕೊಳ್ಳುವುದನ್ನು ಎಲ್ಲರೂ ನೋಡಿರುತ್ತೀರಿ. ಆದರೆ ಇಲ್ಲೊಂದು ಕಡೆ ಬಂಗಾರದ ಹಲ್ಲನ್ನು ಅಳವಡಿಸಲಾಗಿದೆ. ಅದೂ ಸಹ ಪ್ಯೂವರ್ 24 ಕ್ಯಾರೆಟ್‌ನ ಬಂಗಾರದ ಹಲ್ಲು!
ಕಳೆದ 2013 ರಲ್ಲಿ ಇಟಲಿಯ ಮುಗ್ನಾನೋ ಎಂಬಲ್ಲಿ ಖಾಸಗಿಯವರು ಬೆಂಗಾಲ್ ಪ್ರಭೇದದ ಹುಲಿಯನ್ನು ಅಕ್ರಮವಾಗಿ ಸೆರೆಹಿಡಿದಿಟ್ಟಿದ್ದರು. ಬಳಿಕ ಆ ಬೆಂಗಾಲ್ ಟೈಗರನ್ನು 2015ರಲ್ಲಿ ರಕ್ಷಣೆ ಮಾಡಿದ್ದು, ಜರ್ಮನಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಮಾಸ್ಟೀಲರ್‌ನ ಹುಲಿಗಳ ಆಶ್ರಯತಾಣಕ್ಕೆ ಕೊಂಡೊಯ್ಯಲಾಗಿತ್ತು.
ಈ ವೇಳೆ ಅದರ ವಯಸ್ಸು 14 ವರ್ಷವಿದ್ದು, ಸುಮಾರು 60 ಕೆಜಿ ತೂಕವಿತ್ತು. ಇಲ್ಲಿ ಇತರೆ ಹುಲಿಗಳೊಂದಿಗೆ ಇರುವಾಗ ಹುಲಿಯ ಹಲ್ಲಿಗೆ ಪೆಟ್ಟಾಗಿದ್ದು, ಜೊತೆಗೆ ಆಟಿಕೆಗಳೊಂದಿಗೆ ಆಟವಾಡುವಾಗ ಹಲ್ಲಿಗೆ ಇನ್ನಷ್ಟು ಪೆಟ್ಟಾಗಿ ಮುರಿಯುವ ಹಂತದಲ್ಲಿತ್ತು. ಹೀಗಾಗಿ 2019ರಲ್ಲಿ ಪಶು ವೈದ್ಯರು ಈ ಹುಲಿಗೆ ಚಿನ್ನದ ಹಲ್ಲು ಅಳವಡಿಸಲು ನಿರ್ಧರಿಸಿದ್ದರು.
ಅದರಂತೆ ವೈದ್ಯ ಡ್ಯಾನಿಷ್ ನೇತೃತ್ವದ ತಂಡ ಹುಲಿಗೆ ಅರವಳಿಕೆ ನೀಡಿ ಸತತ 4 ಗಂಟೆಗಳ ಕಾಲ ಚಿಕಿತ್ಸೆ ನಡೆಸಿ ಚಿನ್ನದ ಹಲ್ಲನ್ನು ಅಳವಡಿಸಿದ್ದಾರೆ. ಚಿಕಿತ್ಸೆ ಬಳಿಕ ಕೆಲ ದಿನಗಳ ಕಾಲ ಅದಕ್ಕೆ ಮೂಳೆ ರಹಿತ ಮಾಂಸವನ್ನು ನೀಡಿದ್ದು, ಬಳಿಕ ಅದು ಹಲ್ಲಿಗೆ ಹೊಂದಿಕೊಂಡ ನಂತರ ಇದೀಗ ಮೂಳೆಯನ್ನೂ ನೀಡಲಾಗುತ್ತಿದೆ. ಚಿನ್ನದ ಹಲ್ಲಿನ ಹುಲಿ ಇದೀಗ ಪ್ರವಾಸಿಗರ ಅಚ್ಚುಮೆಚ್ಚಿನ ಹುಲಿಯಾಗಿದ್ದು, 24 ಕ್ಯಾರೆಟ್ ಚಿನ್ನದ ಹಲ್ಲು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.