ಬಳ್ಳಾರಿ : ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ವಿಜಯನಗರ ಜಿಲ್ಲೆ ರಚನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.
ಈ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ಮಾಡುತ್ತಿರುವುದನ್ನು ವಿರೋಧಿಸಿ, ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ಇದೇ 26ರಂದು ಬಳ್ಳಾರಿ ಜಿಲ್ಲೆ ಬಂದ್‌ಗೆ ಕರೆ ನೀಡಿದೆ. ಅದಕ್ಕೂ ಮುನ್ನ, ವಿಭಜನೆ ತೀರ್ಮಾನವನ್ನು ಕೈಬಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ನ.23ರಂದು ಜಿಲ್ಲಾಧಿಕಾರಿಗೆ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಮನವಿ ಸಲ್ಲಿಸಲಿದೆ.
ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರಾದ ಕುಡುತಿನಿ ಶ್ರೀನಿವಾಸ್, ದರೂರು ಪುರುಷೋತ್ತಮಗೌಡ, ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧವಿದೆ ಎಂದು ಹೇಳಿದರು. ಹೋದ ವರ್ಷವೇ ಸರ್ಕಾರ ಈ ನಿರ್ಧಾರವನ್ನು ಕೈಬಿಟ್ಟಿತ್ತು. ಆದರೆ ಜನಪ್ರತಿನಿದಿಗಳು, ಮುಖಂಡರ ಜೊತೆ ಸಮಾಲೋಚನೆ ನಡೆಸದೆ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಬಳ್ಳಾರಿ ಜಿಲ್ಲೆ ವಿಭಜನೆಗೆ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಈ ಸಂದರ್ಭದಲ್ಲಿ ಮುಖಂಡರಾದ ಟಪಾಲ್ ಗಣೇಶ್, ಮೋಹನ್ ಕುಮಾರ್, ವಿಜಯ್ ಕುಮಾರ್, ಚಾನಳ್ ಶೇಖರ್, ಬಿಸ್ಲಳ್ಳಿ ಬಸವರಾಜ್ ಉಪಸ್ಥಿತರಿದ್ದರು.