ಹುಬ್ಬಳ್ಳಿ: ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ, ಈಗಾಗಲೇ ಸರ್ಕಾರ ತನಿಖೆಗೆ ಆದೇಶ ನೀಡಿದೆ. ಇದರ ಬೆನ್ನಲ್ಲೇ ಬೆಳಗಾವಿಯಲ್ಲಿಯೂ ಕೂಡ ಬಾಣಂತಿಯರ ಹಾಗೂ ಶಿಶುಗಳ ಸಾವು ಬೆಳಕಿಗೆ ಬಂದಿದೆ. ಇದೀಗ ಈ ಎಲ್ಲಾ ಬಾಣಂತಿಯರ ಸಾವಿಗೆ ಅಂದಿನ ಸಿಎಂ ಹಾಗೂ ಆರೋಗ್ಯ ಸಚಿವರೇ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾದ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ, ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುತ್ತೇವೆ. ಬಿಜೆಪಿಗರು ಕೋವಿಡ್ ವೇಳೆ ಔಷಧಿಯನ್ನು ಖರೀದಿಸಿದ್ದಾರೆ. ಅಲ್ಲದೆ ಒಂದಕ್ಕೆ ಹತ್ತು ಪಟ್ಟು ದುಡ್ಡು ಕೊಟ್ಟು ಖರೀದಿಸಿದ್ದಾರೆ. ಟೆಂಡರ್ ಕರೆಯದೆ ಔಷಧ ಖರೀದಿ ಮಾಡಿದ್ದಾರೆ. ಅಂದಿನ ಸಿಎಂ ಮತ್ತು ಆರೋಗ್ಯ ಸಚಿವರು ಇದಕ್ಕೆ ಹೊಣೆ ಎಂದು ವಾಗ್ದಾಳಿ ನಡೆಸಿದರು.
ಕಳಪೆ ಔಷಧಿ ಕೊಟ್ಟ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕಳಪೆ ಔಷಧ ನೀಡಿದಂತಹ ಕಂಪನಿ ಬ್ಲಾಕ್ ಲಿಸ್ಟ್ ಗೆ ಸೇರಿಸಲು ಹೇಳಿದ್ದೇನೆ. ಡ್ರಗ್ ಕಂಟ್ರೋಲರ್ ಅವರನ್ನು ಅಮಾನತು ಮಾಡಲಾಗಿದೆ. ಇದರ ಜೊತೆಗೆ ಒಂದು ಕಮಿಟಿ ರಚನೆ ಮಾಡಲಾಗಿದೆ. ಆ ಕಮಿಟಿ ವರದಿ ನೀಡಿದ ಬಳಿ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.