ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ದಂಡದ ಮೊತ್ತದ ಶೇಕಡಾ 25% ಶೇಕಡಾವನ್ನು ವಿಚಾರಣಾಧೀನ ನ್ಯಾಯಾಲಯದಲ್ಲಿ ಠೇವಣಿ ಇಡುವ ಷರತ್ತಿಗೆ ಒಳಪಟ್ಟು ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದೆ. ಈ ಮೂಲಕ ಬೇಲೆಕೇರಿ ಅದಿರು ಕಳವು ಪ್ರಕರಣದ ಆರೋಪಿಗಳಾದ ಶಾಸಕ ಸತೀಶ್ ಸೈಲ್ ಸೇರಿ ಇತರೆ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ದೋಷಿಗಳಾಗಿ ಜೈಲು ಪಾಲಾಗಿರುವ ಶಾಸಕ ಸತೀಶ್ ಸೈಲ್, ಖಾರದಪುಡಿ ಮಹೇಶ್, ಚೇತನ್ ಶಾ, ಪ್ರೇಮಚಂದ್ ಗರ್ಗ್, ಕೆವಿಎನ್ ನಾಗರಾಜ್ ಹಾಗೂ ಅವರ ಮಾಲೀಕತ್ವದ ಕಂಪೆನಿಗಳು ತಮಗೆ ವಿಧಿಸಿರುವ ಶಿಕ್ಷೆ ಕೈಬಿಡುವಂತೆ ಕೋರಿ ಸಲ್ಲಿಕೆ ಮಾಡಿರುವ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಇಂದು ಅರ್ಜಿಗಳ ವಿಚಾರಣೆ ನಡೆಸಿತು.
ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಪರವಾಗಿ ವಕೀಲ ಸಿ ವಿ ನಾಗೇಶ್ ವಾದಿಸಿದ್ದರು. ಸುಪ್ರೀಂಕೋರ್ಟ್ ವಿಧಿಸಿರುವ ದಂಡ ಹಾಗೂ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಶಾಸಕ ಸತೀಶ್ ಸೈಲ್ ಮೆಲ್ಮನವಿ ಸಲ್ಲಿಸಿದ್ದರು. ಆರು ಪ್ರಕರಣಗಳಲ್ಲಿ ಸುಮಾರು 18 ಕೋಟಿ ದಂಡ ಪಾವತಿಸಬೇಕಾಗಿದ್ದು, ಇಷ್ಟು ದುಬಾರಿ ದಂಡವನ್ನು ಹೇಗೆ ಪಾವತಿಸಲು ಸಾಧ್ಯ ಎಂದು ಸತೀಶ್ ಸೈಲ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಇನ್ನು ಬೇಲೆಕೇರಿ ಅದಿರು ಕಳವು ಪ್ರಕರಣದಲ್ಲಿ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪೆನಿಯಿಂದ ಯಾರೆಲ್ಲರಿಗೂ ಸತೀಶ ಸೈಲ್ ಹಣ ಪಾವತಿಸಿದ್ದಾರೆ ಎಂಬುದಕ್ಕೆ ಬ್ಯಾಂಕ್ ದಾಖಲೆ ನೀಡಿದ್ದಾರೆ. ಕಬ್ಬಿಣದ ಅದಿರನ್ನು ಯಾರಿಂದ ಖರೀದಿಸಿದ್ದರು ಎಂಬುದಕ್ಕೆ 61 ಕೋಟಿ ರೂಪಾಯಿ ಪಾವತಿಸಿದ ದಾಖಲೆ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ ವಿಚಾರಣೆಯ ಸಂದರ್ಭದಲ್ಲಿ ದೋಷಿಗಳ ನಡತೆಯನ್ನು ಪರಿಗಣಿಸಿ ಅವರಿಗೆ ಜಾಮೀನು ನೀಡಬೇಕು. ಶಿಕ್ಷೆಯನ್ನು ಬದಿಗೆ ಸರಿಸಬೇಕು ಎಂದು ಸೈಲ್ ಪರ ವಕೀಲ ಸಿ.ವಿ.ನಾಗೇಶ ವಾದಿಸಿದ್ದರು.
ಯಾರಿಗೆ ಎಷ್ಟು ದಂಡ ಎಂದು ವಿಧಿಸಲಾಗಿಲ್ಲ. ಇದೊಂದೇ ಕಾರಣ ನೀಡಿ, ಇಡೀ ಆದೇಶವನ್ನು ಅಮಾನತು ಮಾಡಬೇಕು. ಯಾರಿಗೆ ಎಷ್ಟು ದಂಡ ಎಂದು ವಿಧಿಸಬಾರದೇ? ವಿಚಾರಣಾಧೀನ ನ್ಯಾಯಾಲಯದ ವಿರುದ್ಧ ಹೈಕೋರ್ಟ್ ಕಿಡಿ ಕಾರಿದೆ. ದಂಡದ ಮೊತ್ತದ ಶೇಕಡಾ 25 ರಷ್ಟನ್ನು ಆರು ವಾರಗಳಲ್ಲಿ ವಿಚಾರಣಾಧೀನ ನ್ಯಾಯಾಲಯದಲ್ಲಿ ಠೇವಣಿ ಇಡುವಂತೆ ಹೈಕೋರ್ಟ್ ಆದೇಶಿಸಿದೆ.