ಬೆಂಗಳೂರು: ಇಡೀ ರಾಜ್ಯದಲ್ಲೇ ಸಂಚಲನ ಉಂಟುಮಾಡಿದ್ದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ ಸೈಲ್ ಆರೋಪಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಶಾಸಕ ಸೈಲ್ ಆರೋಪಿ ಎಂದು ಸಾಬೀತಾಗಿರುವ ಹಿನ್ನಲೆ ವಶಕ್ಕೆ ಪಡೆಯಲು ನ್ಯಾಯಾಲಯ ಸೂಚನೆ ನೀಡಿದ್ದು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ 2009 ರಿಂದ 2010ರ ನಡುವೆ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಸಾಗಾಟದ ವಿರುದ್ಧ ಸಿಬಿಐ ತನಿಖೆ ಆರಂಭಿಸಿತ್ತು. ಶಾಸಕ ಸತೀಶ್ ಸೈಲ್ ಮಾಲೀಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪೆನಿ ವಿರುದ್ಧ 2013ರ ಸೆಪ್ಟೆಂಬರ್ 13 ರಂದು ಸಿಬಿಐ ಎಫ್‌ಐಆರ್ ದಾಖಲಿಸಿದ್ದು, ಸಿಬಿಐ ದಾಖಲಿಸಿದ್ದ 5 ಪ್ರತ್ಯೇಕ ಪ್ರಕರಣಗಳ ಪೈಕಿ ಇದು ಹೆಚ್ಚು ಪ್ರಾಮುಖ್ಯತೆ ವಹಿಸಿತ್ತು. ಸುಮಾರು 8 ತಿಂಗಳ ಅವಧಿಯಲ್ಲಿ ಸೈಲ್ ಮಾಲೀಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪೆನಿ ಸುಮಾರು 7.23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಬೇಲೇಕೇರಿ ಬಂದರಿನ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.
ಬೇಲೇಕೇರಿ ಬಂದರಿನ ಮೂಲಕ 2009 ರಿಂದ 2010ರ ಮೇ ತಿಂಗಳ ಅವಧಿಯವರೆಗೆ ಸುಮಾರು 73 ಕಂಪೆನಿಗಳ ಮೂಲಕ ಸುಮಾರು 88.06 ಲಕ್ಷ ಮೆಟ್ರಿಕ್ ಟನ್ ಅದಿರು ವಿದೇಶಕ್ಕೆ ರಫ್ತಾಗಿದ್ದನ್ನು ಸಿಇಸಿ ವರದಿಯಲ್ಲಿ ದಾಖಲಿಸಲಾಗಿತ್ತು. ಆದರೆ ರಫ್ತು ಮಾಡಲು ಕೇವಲ 38.22 ಲಕ್ಷ ಮೆಟ್ರಿಕ್ ಟನ್ ಅದಿರಿಗೆ ಮಾತ್ರವೇ ಪರವಾನಗಿ ಪಡೆದಿದ್ದು ಸುಮಾರು 50 ಲಕ್ಷ ಮೆಟ್ರಿಕ್‌ನಷ್ಟು ಅದಿರು ಅಕ್ರಮವಾಗಿ ವಿದೇಶಕ್ಕೆ ರಫ್ತಾಗಿದ್ದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಪ್ರಕರಣ ಸಂಬಂಧ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ವಾದ ಪ್ರತಿವಾದವನ್ನು ಆಲಿಸಿದ ಬಳಿಕ ಸತೀಶ ಸೈಲ್‌ರನ್ನು ಆರೋಪಿ ಎಂದು ಅಂತಿಮ ಆದೇಶ ಹೊರಡಿಸಿದ್ದು, ನಾಳೆ ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಹಿನ್ನಲೆ ಸೈಲ್ ಬಂಧನಕ್ಕೆ ಸೂಚನೆ ನೀಡಿದ್ದಾರೆ.