ಬೆಳಗಾವಿ: ಅಪರಾಧ ಪ್ರಕರಣಗಳು ಕಡಿಮೆಯಾಗಲಿ ಎಂದು ಪೊಲೀಸರೇ ಠಾಣೆಯಲ್ಲಿ ಪೂಜೆ ಸಲ್ಲಿಸಿರುವ ವಿಚಿತ್ರ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಇಲ್ಲಿನ ಮಳಮಾರುತಿ ಠಾಣೆಯ ಹಾಲ್‌ನಲ್ಲಿ ಪೊಲೀಸರು ರಣಚಂಡಿಕಾ ಹೋಮ ಕೈಗೊಂಡಿದ್ದಾರೆ.
ಕಳೆದ ಒಂದೂವರೆ ತಿಂಗಳಲ್ಲಿ ಮಳಮಾರುತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಕೊಲೆ, ಸುಲಿಗೆ, ದರೋಡೆ, ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ, ಯುವಕನ ಮೇಲೆ ಗುಂಡಿನ ದಾಳಿ ಹೀಗೆ 45ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಹೀಗಾಗಿ ಅಪರಾಧ ನಿಯಂತ್ರಣಕ್ಕೆ ಪೊಲೀಸರು ಸಾಕಷ್ಟು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನಗಳಾಗುತ್ತಿಲ್ಲ. ಈ ಹಿನ್ನೆಲೆ ಠಾಣಾಧಿಕಾರಿ ಜೆ.ಎಂ.ಖಾಲಿಮಿರ್ಚಿ, ದೇವರ ಮೊರೆ ಹೋಗಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಹೋಮ ಮಾಡಿಸಿ, ವಿಶೇಷ ಪೂಜೆ ಕೈಗೊಂಡಿದ್ದು, ಠಾಣೆಯ ಎದುರು ಬೂದಗುಂಬಳಕಾಯಿ ಒಡೆದು ಪೂಜೆ ನೆರವೇರಿಸಲಾಗಿದೆ. ಪೊಲೀಸರೇ ಠಾಣೆಯಲ್ಲಿ ಹೋಮ-ವಿಶೇಷ ಪೂಜೆ ನೆರವೇರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಮೂಢನಂಬಿಕೆಗೆ ಪೊಲೀಸರೇ ಶರಣಾಗಿದ್ದಾರಾ ಎಂದು ಜನಸಾಮಾನ್ಯರು ಮಾತನಾಡುವಂತಾಗಿದೆ.