ಬೆಳಗಾವಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ಸಹೋದರ ಸಂಬಂಧಿಗಳಿಂದಲೇ ಬ್ಯಾಂಕ್ ಉದ್ಯೋಗಿಯೋರ್ವ ಹತ್ಯೆಗೊಳಗಾದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಿಡಕಲ್ ಗ್ರಾಮದಲ್ಲಿ ನಡೆದಿದೆ. ಲಕ್ಕಪ್ಪ ಬಬಲ್ಯಾಗೋಳ(37) ಮೃತ ದುರ್ದೈವಿಯಾಗಿದ್ದಾನೆ.
ಇದೇ ಫೆ.6 ರಂದು ಬ್ಯಾಂಕ್ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಲಕ್ಕಪ್ಪನನ್ನು ನಾಲ್ವರು ಸಹೋದರ ಸಂಬಂಧಿಗಳು ಹಿಡಕಲ್ ಗ್ರಾಮದ ತೋಟಕ್ಕೆ ಕರೆದೊಯ್ದಿದ್ದರು. ಅಲ್ಲಿ ಬೈಕಿನ ಶಾಕ್‌ಅಬ್ಸರ್ಬರ್‌ನಿಂದ ಮನಸೋಇಚ್ಚೆ ಹಲ್ಲೆ ನಡೆಸಿದ್ದರು.
ತೋಟದಲ್ಲಿ ಗಲಾಟೆ ಸದ್ದು ಕೇಳಿ ಗ್ರಾಮಸ್ಥರು ಜಮಾವಣೆಗೊಂಡಿದ್ದು, ಈ ವೇಳೆ ಗ್ರಾಮಸ್ಥರು ಮೂವರು ಆರೋಪಿಗಳನ್ನು ಹಿಡಿದು ದೇವಸ್ಥಾನದಲ್ಲಿ ಲಾಕ್ ಮಾಡಿ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಲಕ್ಕಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಇಂದು ಬಿಮ್ಸ್ ಆಸ್ಪತ್ರೆಯಲ್ಲಿ ಲಕ್ಕಪ್ಪ ಬಬಲ್ಯಾಗೋಳ ಕೊನೆಯುಸಿರೆಳೆದಿದ್ದಾನೆ. ಆರೋಪಿಗಳನ್ನು ಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.