ಬೆಂಗಳೂರು: ಬಡತನದ ಹಿನ್ನಲೆ 15 ಸಾವಿರ ರೂಪಾಯಿಗೆ ತನ್ನ ಮಗುವನ್ನು ಮಾರಾಟ ಮಾಡಿದ್ದ ಬಡ ಮಹಿಳೆ ಮೇಲಿನ ಎಫ್‌ಐಆರ್‌ನ್ನು ಹೈಕೋರ್ಟ್ ರದ್ದುಪಡಿಸಿದೆ. ಆರ್ಥಿಕ ಸಮಸ್ಯೆಯಿಂದ ಮಹಿಳೆ ಮಗು ಮಾರಾಟ ಮಾಡಿದ್ದನ್ನು ಪರಿಗಣಿಸಿ ಮರುಗಿದ ಹೈಕೋರ್ಟ್ ಮಹಿಳೆಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದೆ.
ದಿನಗೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆಗೆ ಒಂದು ಗಂಡು, ಒಂದು ಹೆಣ್ಣು ಮಗುವಿದ್ದು, ಗಂಡ ಸಹ ದೂರಾಗಿದ್ದ. ಒಬ್ಬಳೇ ದುಡಿದು ಬದುಕು ಸಾಗಿಸಬೇಕಾದ ಕಾರಣ ಮಕ್ಕಳನ್ನು ಸಾಕಲು ಆರ್ಥಿಕ ಸಂಕಷ್ಟ ಎದುರಾಗಿದ್ದು, ಈ ಹಿನ್ನಲೆ ಮಕ್ಕಳಿಲ್ಲದ ಮಹಾರಾಷ್ಟ್ರ ಮೂಲದ ದಂಪತಿಗೆ ಮಹಿಳೆ 2019ರಲ್ಲಿ ಮಗುವೊಂದನ್ನು ಮಾರಾಟ ಮಾಡಿದ್ದಳು.
ಈ ವೇಳೆ ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದು, ಕಾನೂನು ಪ್ರಕಾರವಾಗಿ ದತ್ತು ಪ್ರಕ್ರಿಯೆ ನಡೆಯದ ಹಿನ್ನಲೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ದೂರಿನ ಮೇರೆಗೆ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರ ಏಕಸದಸ್ಯ ಪೀಠ ಮಹಿಳೆ ಮನವಿ ಪುರಸ್ಕರಿಸಿ ಪ್ರಕರಣ ರದ್ದುಗೊಳಿಸಿದೆ.