ದಾವಣಗೆರೆ: 17 ವರ್ಷದ ಬಾಲಕನೋರ್ವ ಕೈಯಲ್ಲಿ ಮಗುವನ್ನು ಎತ್ತಿಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಆತ ದಾವಣಗೆರೆಗೆ ಬಂದು ಇಳಿಯುತ್ತಿದ್ದಂತೆ ತಪಾಸಣೆ ನಡೆಸುತ್ತಿದ್ದ RPF ಪೋಲೀಸರು ಮಗುವಿನೊಂದಿಗೆ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಆತನನ್ನು ಬಂಧಿಸಲು ಕಾರಣವಾಗಿದ್ದು, ಆತನ ಕೈಯಲ್ಲಿದ್ದ ಪುಟ್ಟ ಮಗು.
ದಾವಣಗೆರೆ ಮೂಲದ ಬಾಲಕ ತರುಣ್(17) ತನ್ನ ಅಕ್ಕನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಭಾನುವಾರ ಏಕಾಏಕಿ ತನ್ನದೇ ಅಕ್ಕನ 3 ವರ್ಷದ ಮಗುವನ್ನು ಎತ್ತಿಕೊಂಡು ಬೆಂಗಳೂರಿನಿಂದ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು ಏರಿ ದಾವಣಗೆರೆಗೆ ಪ್ರಯಾಣಿಸಿದ್ದ. ಮಗು ಕಾಣೆಯಾದ ದೂರು ನೀಡಿದ್ದ ಹಿನ್ನಲೆ ಬೆಂಗಳೂರು ಪೊಲೀಸರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಲಕ ದಾವಣಗೆರೆಗೆ ಬರುತ್ತಿದ್ದಂತೆ ಆತನನ್ನು ಹಾಗೂ ಮಗುವನ್ನು ವಶಕ್ಕೆ ಪಡೆದು ರಕ್ಷಣೆ ಮಾಡಲಾಗಿದೆ. ಅಷ್ಟಕ್ಕೂ ಆತ ತನ್ನದೇ ಅಕ್ಕನ ಮಗುವನ್ನು ಕಿಡ್ನ್ಯಾಪ್ ಮಾಡಲು ಕಾರಣವಾಗಿದ್ದು ಅಕ್ಕನ ಅಕ್ರಮ ಸಂಬಂಧ ಅನ್ನೋದನ್ನು ಬಾಲಕ ಹೇಳಿಕೊಂಡಿದ್ದಾನೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಅಕ್ಕ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆತನೊಂದಿಗೆ ವಾಸಿಸುತ್ತಿದ್ದಳು. ಈ ವೇಳೆ ಅಕ್ರಮ ಸಂಬಂಧವನ್ನು ನಿಲ್ಲಿಸುವಂತೆ ಸಾಕಷ್ಟು ಬಾರಿ ತಮ್ಮ ತರುಣ ಅಕ್ಕನಿಗೆ ಹೇಳಿದ್ದರೂ ಆಕೆ ಪರಪುರುಷನನ್ನು ಬಿಡಲು ತಯಾರಿರಲಿಲ್ಲ. ಹೀಗಾಗಿ ಬೇಸತ್ತ ಯುವಕ ತರುಣ ಅಕ್ಕನಿಗೆ ಬುದ್ದಿ ಕಲಿಸುವ ಉದ್ದೇಶದಿಂದ ಅಕ್ಕನ ಮಗುವನ್ನು ಕಿಡ್ನ್ಯಾಪ್ ಮಾಡಿಕೊಂಡು ಬೆಂಗಳೂರಿನಿಂದ ಹೊರಟು ಬಂದಿದ್ದ. ಆದರೆ ದಾವಣಗೆರೆಯಲ್ಲಿ ರೈಲ್ವೇ ಪೊಲೀಸರು ಬಾಲಕ ಹಾಗೂ ಆತನ ಕೈಯಲ್ಲಿದ್ದ ಮಗುವನ್ನು ತಡೆದು ರಕ್ಷಣೆ ಮಾಡಿದ್ದಾರೆ. ರೈಲ್ವೆ ಇನ್ಸ್‌ಪೆಕ್ಟರ್ A K ರೆಡ್ಡಿ, ಸಿಬ್ಬಂದಿಗಳಾದ ಶಿವಾನಂದ, ಅಮಿತ್, ಬಿಂದು ಮಧುರಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.