Ugadi festival : ಯುಗಾದಿ ಹಬ್ಬವು ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ಈ ಹಬ್ಬವನ್ನು ಹಿಂದೂಗಳು ಚೈತ್ರ ಮಾಸದ ಮೊದಲ ದಿನದ೦ದು ಆಚರಿಸುತ್ತಾರೆ. ಯುಗದ ಆದಿಯನ್ನು ಸೂಚಿಸುವ ಈ ಹಬ್ಬದ ಶುಭ ಮುಹೂರ್ತ, ಪೂಜಾವಿಧಾನದ ಕುರಿತು ತಿಳಿದುಕೊಳ್ಳಿ.
ಯುಗಾದಿಯ ಮುಹೂರ್ತ
2025 ನೇ ವರ್ಷದ ಯುಗಾದಿ ಹಬ್ಬವನ್ನು ಮಾರ್ಚ್ 30 ರಂದು ಭಾನುವಾರ ಆಚರಿಸಲಾಗುತ್ತಿದ್ದು, ಪಾಡ್ಯಮಿ ತಿಥಿ ಮಾರ್ಚ್ 29 ರಂದು ಸಂಜೆ 4.27 ಗಂಟೆಗೆ ಪ್ರಾರಂಭವಾಗಿದ್ದು, ಮಾರ್ಚ್ 30 ರಂದು ಮಧ್ಯಾಹ್ನ 12.49 ಗಂಟೆಗೆ ಮುಕ್ತಾಯವಾಗುತ್ತದೆ.
ಬೇಗನೆ ಏಳಿ
ಯುಗಾದಿಯಂದು ಮುಂಜಾನೆ ಬೇಗ ಎದ್ದು ಕಡಲೆ ಹಿಟ್ಟನ್ನು ಮತ್ತು ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಬೇಕು. ನಂತರ ಕೈಯಲ್ಲಿ ಶ್ರೀಗಂಧ, ಅಕ್ಷತೆ, ಹೂವುಗಳು ಮತ್ತು ನೀರನ್ನು ತೆಗೆದುಕೊಂಡು ಬ್ರಹ್ಮದೇವನ ಮಂತ್ರಗಳನ್ನು ಪಠಿಸುತ್ತಾ ಬ್ರಹ್ಮದೇವನ ಪೂಜೆ ಮಾಡಬೇಕು.
ರಂಗೋಲಿ ಹಾಕಿ
ಮನೆಯ ಮು೦ದೆ ವಿಶೇಷವಾದ ರಂಗೋಲಿಯನ್ನು ಹಾಕಬೇಕು. ಇದರಿಂದ ಆ ಮನೆಗೆ ಧನಾತ್ಮಕ ಶಕ್ತಿಗಳ ಆಗಮನವಾಗುತ್ತದೆ ಎನ್ನುವ ನ೦ಬಿಕೆಯಿದೆ. ನೀವು ಬ್ರಹ್ಮ ದೇವನ ಬದಲು ನಿಮ್ಮ ನೆಚ್ಚಿನ ದೇವರನ್ನು ಅಥವಾ ನಿಮ್ಮಮನೆ ದೇವರನ್ನು ಕೂಡ ಪೂಜಿಸಿ ಆಶೀರ್ವಾದವನ್ನು ಪಡೆದುಕೊಳ್ಳಬಹುದು
ಬೇವು ಬೆಲ್ಲ
ಸಂತೋಷ ಮತ್ತು ದುಃಖವನ್ನು ವರ್ಷವಿಡೀ ಸಮಾನವಾಗಿ ಸ್ವೀಕರಿಸಬೇಕೆ೦ಬ ಅರ್ಥದಲ್ಲಿ ಯುಗಾದಿಯ೦ದು ಬೇವು, ಬೆಲ್ಲ ಸೇವಿಸಲಾಗುತ್ತದೆ. ಬೇವಿನ ಎಲೆಗಳು ಅನೇಕ ರೋಗಗಳನ್ನು ದೂರ ಇರಿಸುತ್ತದೆ. ಬೇವು ಸವಿಯಲು ಕಹಿ ಆಗಿದ್ದರೂ, ದೇಹದಲ್ಲಿರುವ ಕಫ ಕರಗಿಸುತ್ತದೆ.
ಪಚಡಿ ತಯಾರಿಸಿ
ಪಚಡಿ ಎ೦ಬ ಪಾನೀಯವನ್ನು ತಯಾರಿಸುವುದು ಹಿ೦ದಿನಿ೦ದಲೂ ನಡೆದುಕೊಂಡು ಬ೦ದಿದ್ದು, ಹೊಸ ಹುಣಸೆಹಣ್ಣು, ಮಾವು, ತೆಂಗಿನಕಾಯಿ, ಬೇವಿನ ಹೂವುಗಳು, ಬೆಲ್ಲದಂತಹ ವಸ್ತುಗಳನ್ನು ಬೆರೆಸಿ ಮಡಕೆಯಲ್ಲಿ ತಯಾರಿಸಲಾಗುವುದಲ್ಲದೆ, ಈ ಪಾನೀಯವನ್ನು ಕುಟುಂಬದ ಸದಸ್ಯರು ಕುಡಿಯುವುದು ಮಾತ್ರವಲ್ಲದೇ, ಎಲ್ಲರಿಗೂ ಹಂಚಲಾಗುತ್ತದೆ.