ಮಂಗಳೂರು: ಅಮೆಜಾನ್ ಮೂಲಕ ಆನ್‌ಲೈನ್‌ನಲ್ಲಿ ದುಬಾರಿ ಬೆಲೆಯ ವಸ್ತುಗಳನ್ನು ಆರ್ಡರ್ ಮಾಡಿ, ನಂತರ ಒಳಗಿದ್ದ ವಸ್ತುಗಳನ್ನು ತೆಗೆದು ಟ್ರ್ಯಾಕಿಂಗ್ ಐಡಿ ಬದಲಾಯಿಸಿ ರಿಟರ್ನ್ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಧೋಪುರ್ ಜಿಲ್ಲೆಯ ನಿವಾಸಿ ರಾಜಕುಮಾರ್ ಮೀನಾ(23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್(27) ಬಂಧಿತ ಆರೋಪಿಗಳಾಗಿದ್ದಾರೆ.
ಈ ಆರೋಪಿಗಳು ಜಾಗತಿಕ ದೈತ್ಯ ಅಮೆಜಾನ್‌ನಿಂದ ಆನ್ಲೈನ್ ಮೂಲಕ ವಿವಿಧ ರೀತಿಯ ಬೆಲೆಬಾಳುವ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಈ ವಸ್ತುಗಳನ್ನು ಬೇರೆ ಬೇರೆ ಭಾಗದ ನಕಲಿ ವಿಳಾಸಗಳಿಗೆ ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದರು. ಬಳಿಕ ಡೆಲಿವರಿಯಾದ ವಸ್ತುಗಳ ಬಾಕ್ಸಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿ ರಿಟರ್ನ್ ಮಾಡುವ ಮೂಲಕ ಅಮೆಜಾನ್ ಸಂಸ್ಥೆಗೆ ವಂಚಿಸುತ್ತಿದ್ದರು. ನಂತರ ಆರ್ಡರ್ ಮಾಡಿದ ಬೆಲೆಬಾಳುವ ವಸ್ತುಗಳನ್ನು ಹೊರಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು.
ಕಳೆದ 4-5 ವರ್ಷಗಳಿಂದ ಈ ವಂಚಕರು ಈ ರೀತಿಯ ವಂಚನೆ ಖಯಾಲಿಯನ್ನು ರೂಢಿಸಿಕೊಂಡಿದ್ದು ಸುಮಾರು 30 ಕೋಟಿಯಷ್ಟು ವಂಚನೆ ಮಾಡಿದ್ದಾರೆ. ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಇವರು ಮಾಡಿದ ವಂಚನೆ ಇದೀಗ ಬಯಲಾಗಿದೆ. ವಸ್ತುಗಳನ್ನು ಎರಡನೇ ಹಂತದ ನಗರಗಳ ವಿಳಾಸಗಳಿಗೇ ತರಿಸಿಕೊಳ್ಳುತ್ತಿದ್ದ ವಂಚಕರು, ಕೆಲವೊಮ್ಮೆ ಬುಕ್ ಮಾಡಿದ ವಸ್ತುಗಳನ್ನು ಡಿಲೆವರಿ ಪಡೆಯಲು ವಿಮಾನದಲ್ಲಿಯೂ ಪ್ರಯಾಣಿಸಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನ ವಿಳಾಸವೊಂದರಲ್ಲಿ ಕಿರಾತಕರು ಲಕ್ಷಾಂತರ ಮೌಲ್ಯದ ಕ್ಯಾಮೆರಾ ಆರ್ಡರ್ ಮಾಡಿದ್ದರು. ಬಳಿಕ ವಸ್ತುಗಳನ್ನು ರಿಟರ್ನ್ ಆರ್ಡರ್ ಹಾಕಿದ್ದು ಈ ವೇಳೆ ಡೆಲಿವರಿ ಬಾಯ್ ಆರ್ಡರ್ ಪಡೆಯಲು ಓಟಿಪಿ ಕೇಳಿದಾಗ ಓಟಿಪಿ ತಪ್ಪಾಗಿದೆ. ಹೀಗಾಗಿ ವಂಚಕರು ನಾಳೆ ಬರುವಂತೆ ಡೆಲಿವರಿ ಬಾಯ್‌ಗೆ ತಿಳಿಸಿದ್ದು, ಆತ ವಾಪಸ್ ತೆರಳುತ್ತಿದ್ದಂತೆ ಕಿರಾತಕರು ಆರ್ಡರ್ ಕ್ಯಾನ್ಸಲ್ ಮಾಡಿದ್ದು ಇದರಿಂದ ಡೆಲಿವರಿ ಬಾಯ್‌ಗೆ ಅನುಮಾನ ಉಂಟಾಗಿದೆ.
ಬಳಿಕ ಆರ್ಡರ್ ಐಡಿ ಪರಿಶೀಲಿಸಿದಾಗ ಕಿರಾತಕರ ವಂಚನೆ ಬಯಲಾಗಿದ್ದು, ಅಮೇಜಾನ್ ಸಿಬ್ಬಂದಿ ಮಂಗಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಉರ್ವಾ ಠಾಣೆಯ ಪೊಲೀಸರು ಖದೀಮರ ಮೋಸದ ಜಾಲ ಭೇದಿಸಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.