ಅಸ್ಸಾಂ: ಸುಮಾರು 60ಕ್ಕೂ ಅಧಿಕ ಆನೆಗಳ ಹಿಂಡಿಗೆ ರೈಲೊಂದು ಡಿಕ್ಕಿಯಾಗುತ್ತಿದ್ದ ಬಹುದೊಡ್ಡ ದುರಂತವೊಂದು ಲೋಕೋ ಪೈಲಟ್ ಸಮಯಪ್ರಜ್ಞೆ ಹಾಗೂ AI ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ತಪ್ಪಿದಂತಾಗಿದೆ. ಅಸ್ಸಾಂನ ಹಬಿಪುರ್ ಹಾಗೂ ಲಾಮ್ಸಾಖಾಂಗ್ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ.
ಇದೇ ಅಕ್ಟೋಬರ್ 16 ರಂದು ರಾತ್ರಿ 8:37ರ ವೇಳೆಗೆ, ಗುವಾಹಟಿಯಿಂದ ಲುಮಡಿಂಗ್ ತೆರಳುತ್ತಿದ್ದ ರೈಲು ಸಂಖ್ಯೆ 15959 ಕಾಮರೂಪ್ ಎಕ್ಸಪ್ರೆಸ್ ರೈಲು, ಹಬಿಪುರ್-ಲಾಮ್ಸಾಖಾಂಗ್ ನಿಲ್ದಾಣಗಳ ನಡುವೆ 166/8 – 167/0 ಕಿಮೀ ತಲುಪಿದ ವೇಳೆ ತುರ್ತು ಬ್ರೇಕ್‌ಗಳನ್ನು ಅಳವಡಿಸಿ ರೈಲನ್ನು ನಿಲ್ಲಿಸಲಾಗಿತ್ತು.
ರೈಲು ತೆರಳುತ್ತಿದ್ದ ವೇಳೆ AI ಆಧರಿತ ಇಂಟ್ರೂಷನ್ ಡಿಟೆಕ್ಷನ್ ಸಿಸ್ಟಂ(IDS)ನಿಂದ ರೈಲ್ವೇ ಮಾರ್ಗದಲ್ಲಿ ವನ್ಯಜೀವಿಗಳ ಇರುವಿಕೆಯ ಕುರಿತು ಎಚ್ಚರಿಕೆ ಸಂದೇಶ ನೀಡಿದ್ದು, ಪೂರ್ವ ನಿರ್ಧರಿತ ಪ್ರೊಟೋಕಾಲ್‌ನಂತೆ ರೈಲಿನ ಲೋಕೋಪೈಲಟ್ ಹಾಗೂ ಸಹಾಯಕ ಲೋಕೋಪೈಲಟ್ ರೈಲಿನ ತುರ್ತು ಬ್ರೇಕ್‌ಗಳನ್ನು ಅಳವಡಿಸುವ ಕ್ರಮವನ್ನು ಕೈಗೊಂಡಿದ್ದರು. ಈ ತಂತ್ರಜ್ಞಾನವು ರೈಲಿಗೆ ವನ್ಯಜೀವಿಗಳು, ಪ್ರಮುಖವಾಗಿ ಆನೆಗಳು ಡಿಕ್ಕಿಯಾಗುವ ದುರಂತಗಳನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
IDS ತಂತ್ರಜ್ಞಾನವು ಫೈಬರ್ ಆಪ್ಟಿಕ್ಸ್ ಆಧರಿತ ಸೆನ್ಸರ್ ವ್ಯವಸ್ಥೆಯನ್ನು ಹೊಂದಿದ್ದು, ವಾಸ್ತವ ಸಮಯದಲ್ಲಿ ಪ್ರಾಣಿಗಳ ಚಲನೆಯನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ಇದು ಸುಮಾರು 80 ಕಿಮೀ ವ್ಯಾಪ್ತಿಯಲ್ಲಿ ರೈಲ್ವೇ ಹಳಿಗಳ ಮೇಲೆ ನಿಗಾ ಇರಿಸಲಿದ್ದು, ವನ್ಯಜೀವಿ ಚಲನೆ, ಹಳಿಗಳ ಬಿರುಕು, ಹಳಿಯ ಮೇಲೆ ಬೇರೆ ರೈಲಿನ ಆಗಮನ, ಹಳಿಗಳ ಮೇಲೆ ಗುಡ್ಡಕುಸಿತವನ್ನೂ ಪತ್ತೆ ಮಾಡಬಹುದಾದ ಸಾಮರ್ಥ್ಯವನ್ನು ಹೊಂದಿದೆ.
ಹೀಗಾಗಿ ಈ ತಂತ್ರಜ್ಞಾನದಿಂದಾಗಿ ರೈಲು-ವನ್ಯಜೀವಿ ಅಪಘಾತಗಳು ತಗ್ಗಿದಂತಾಗಿದ್ದು, ಇದರಿಂದ ವನ್ಯಜೀವಿಗಳ ಸುರಕ್ಷತೆ ಜೊತೆಗೆ ರೈಲುಗಳ ಸುರಕ್ಷಿತ ಚಾಲನೆಗೂ ಸಾಕಷ್ಟು ನೆರವು ಸಿಕ್ಕಂತಾಗಿದೆ.