ಮೈಸೂರು: ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ತನ್ನ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನ ಬೀದಿಯಲ್ಲಿ ನಡೆದಿದೆ.
ಗಾಯತ್ರಿ (18) ಹತ್ಯೆಯಾದ ನತದೃಷ್ಟ ಯುವತಿಯಾಗಿದ್ದು, ಜಯಣ್ಣ ಕೊಲೆಗೈದ ಆರೋಪಿ ತಂದೆಯಾಗಿದ್ದಾರೆ. ಮೃತ ಗಾಯತ್ರಿ ರಾಘವೇಂದ್ರ ಎಂಬ ಅನ್ಯ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಮನೆಯವರು ಎಷ್ಟು ಬುದ್ದಿವಾದ ಹೇಳಿದರೂ ಕೇಳಿರಲಿಲ್ಲ. ಅವನನ್ನೇ ಮದುವೆಯಾಗುತ್ತೇನೆ ಎಂದು ಗಾಯತ್ರಿ ಹಠ ಹಿಡಿದಿದ್ದಳು.
ಹೀಗಾಗಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಊಟ ಕೊಡಲು ಬಂದ ಗಾಯತ್ರಿ ಮೇಲೆ ತಂದೆ ಜಯರಾಮ್ ಮಚ್ಚನಿಂದ ಕೊಚ್ಚಿ ಕೊಂದು, ನಂತರ ಪೋಲಿಸ್ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಇನ್ನು, ಘಟನಾ ಸ್ಥಳಕ್ಕೆ ಡಿವೈಎಸ್ಪಿ ರವಿ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪಿರಿಯಾಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ.