ಬಳ್ಳಾರಿ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಮರ್ಯಾದ ಹತ್ಯೆ ಪ್ರಕರಣವೊಂದು ಬಯಲಾಗಿದ್ದು, ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಂದ ಘಟನೆ ಬಳ್ಳಾರಿಯ ಕುಡುತಿನಿಯಲ್ಲಿ ನಡೆದಿದೆ.
ಹೌದು, ಮಗಳು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದ ಅಪ್ಪ, ಆಕೆಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಓಂಕಾರ್ ಗೌಡ ಎಂಬಾತ ಮಗಳನ್ನು ಕೊಲೆಗೈದ ಆರೋಪಿ. ಈತನ ಮಗಳು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.
ಮಗಳು ಹೈಸ್ಕೂಲ್ ವಿದ್ಯಾರ್ಥಿನಿ. ಪ್ರೀತಿ-ಪ್ರೇಮದಿಂದ ದೂರವಿರು ಎಂದು ಹೇಳಿದರೂ ಕೇಳದ ಆಕೆಯನ್ನು ತಂದೆ ಓಂಕಾರಗೌಡ, ಸಿನಿಮಾ ತೋರಿಸುವುದಾಗಿ ಕರೆದೊಯ್ದು ತಿಂಡಿ ತಿನ್ನಿಸಿ, ದೇವರ ದರ್ಶನ ಮಾಡಿಸಿ, ಚಿನ್ನದ ಓಲೆ, ಉಂಗುರ ಕೊಡಿಸಿದ್ದಾನೆ. ನಂತರ ಬಳ್ಳಾರಿಯ ಕುಡಿತಿನಿ ಪಟ್ಟಣದ ಸಿದ್ಧಮ್ಮನಹಳ್ಳಿ ಬಳಿಯ ತುಂಗಭದ್ರ ಹೆಚ್ ಎಲ್ ಸಿ ಕಾಲುವೆ ಬಳಿ ಕರೆತಂದು ಹಿಂದಿನಿಂದ ತಳ್ಳಿದ್ದಾನೆ. ಬಳಿಕ ಬೈಕನ್ನು ಗೆಳೆಯನ ಮನೆಯಲ್ಲಿ ಬಿಟ್ಟು ತಿರುಪತಿಗೆ ರೈಲು ಹತ್ತಿದ್ದಾನೆ.
ಇನ್ನು, ಅಕ್ಟೋಬರ್ 31ರಂದು ಈ ಘಟನೆ ನಡೆದಿದ್ದು, ಪ್ರಕರಣ ಬೇಧಿಸಿದ ಪೊಲೀಸರು ನಿನ್ನೆ (ಮಂಗಳವಾರ) ಆರೋಪಿಯನ್ನು ಬಂಧಿಸಿದ್ದಾರೆ.