ಪಿಂಚಣಿ ಜನರಿಗೆ ಸ್ಥಿರ ಆದಾಯವನ್ನು ನೀಡುತ್ತಿದ್ದು, ಕೇಂದ್ರ ಸರ್ಕಾರವು ಪ್ರಸ್ತುತ ವಿವಿಧ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ, ಎಲ್ಲಾ ಪಿಂಚಣಿ ಯೋಜನೆಗಳಿಗಿಂತ ಅಟಲ್ ಪಿಂಚಣಿ ಯೋಜನೆ (APY) ಮಹಿಳೆಯರು ಮತ್ತು ಯುವಕರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದ್ದು, ಸೆಪ್ಟೆಂಬರ್ 2021 ರ ಹೊತ್ತಿಗೆ, 18 ರಿಂದ 25 ವರ್ಷ ವಯಸ್ಸಿನ 43 ಪ್ರತಿಶತದಷ್ಟು ಜನರು ಯೋಜನೆಗೆ ಸೇರಿದ್ದಾರೆ. ಮಾರ್ಚ್ 2016 ರಲ್ಲಿ, ಈ ವಯಸ್ಸಿನ ಕೇವಲ 29 ಪ್ರತಿಶತದಷ್ಟು ಜನರು ಅಟಲ್ ಪಿಂಚಣಿ ಯೋಜನೆಗೆ ಸೇರಿದ್ದರು.
ಅಟಲ್ ಪಿಂಚಣಿ ಯೋಜನೆಯು ಹೆಚ್ಚು ಮಹಿಳೆಯರನ್ನು ಆಕರ್ಷಿಸುತ್ತಿದ್ದು, ಮಹಿಳೆಯರು ಈ ಯೋಜನೆಯಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ ಎಂದು ಸರ್ಕಾರ ಹಣಕಾಸು ಸಮೀಕ್ಷೆಯ ದಾಖಲೆಯಲ್ಲಿ ತಿಳಿಸಿದೆ. ಮಾರ್ಚ್ 2016 ರಲ್ಲಿ, ಈ ಯೋಜನೆಯಲ್ಲಿ ಮಹಿಳೆಯರ ಪಾಲು ಶೇಕಡಾ 37 ರಷ್ಟಿತ್ತು, ಸೆಪ್ಟೆಂಬರ್ 2021 ರ ಹೊತ್ತಿಗೆ ಇದು ಶೇಕಡಾ 44 ಕ್ಕೆ ಏರಿಕೆಯಾಗಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ ಹೆಚ್ಚು ಜನರು ಈ ಮಾಸಿಕ ಪಿಂಚಣಿ ಯೋಜನೆಯನ್ನು ತೆಗೆದುಕೊಳ್ಳುತ್ತಿದ್ದಾರೆ.
ಮಾರ್ಚ್ 2016 ರ ಹೊತ್ತಿಗೆ, ಜನಸಂಖ್ಯೆಯ ಶೇಕಡಾ 38 ರಷ್ಟು ಜನರು ರೂ 1,000 ಮಾಸಿಕ ಪಿಂಚಣಿ ಆಯ್ಕೆಯನ್ನು ಮಾಡಿಕೊಂಡಿದ್ದು, ಸೆಪ್ಟೆಂಬರ್ 2021 ರ ವೇಳೆಗೆ ಈ ಸಂಖ್ಯೆಯು ಶೇಕಡಾ 78 ಕ್ಕೆ ಏರಿಕೆಯಾಗಿದೆ. ಕೇವಲ 8 ಪ್ರತಿಶತ ಜನರು ಮಾತ್ರ ಮಾಸಿಕ ಪಿಂಚಣಿ ಆಯ್ಕೆಗಳಾದ 2,000, 3,000 ಮತ್ತು 4,000 ರೂ. ಅರಸಿಕೊಂಡಿದ್ದಾರೆ. ಇನ್ನು,14% ಜನರು ಮಾತ್ರ 5,000 ರೂಪಾಯಿಗಳ ಮಾಸಿಕ ಪಿಂಚಣಿ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ.
ಅಟಲ್ ಪಿಂಚಣಿ ಯೋಜನೆ ಬಗ್ಗೆ..
18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾರಾದರೂ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿಯು 18 ವರ್ಷ ವಯಸ್ಸಿನವರಾಗಿದ್ದರೆ ಅವರು ತಿಂಗಳಿಗೆ ರೂ 42 ಹೂಡಿಕೆ ಮಾಡಿದರೆ, ಅವರಿಗೆ 60 ವರ್ಷಗಳು ತಲುಪಿದ ನಂತರ ತಿಂಗಳಿಗೆ ರೂ 1000 ಪಿಂಚಣಿ ಪಡೆಯಬಹುದು. ಅಲ್ಲದೆ 18ನೇ ವಯಸ್ಸಿನಲ್ಲಿ ತಿಂಗಳಿಗೆ 210 ರೂಪಾಯಿ ಹೂಡಿಕೆ ಮಾಡಿದರೆ 5000 ರೂಪಾಯಿ ಪಿಂಚಣಿ ಸಿಗುತ್ತದೆ.
ಅಲ್ಲದೆ ವಯಸ್ಸಾದಂತೆ ಪ್ರೀಮಿಯಂ ಮೊತ್ತವು ಕೂಡ ಹೆಚ್ಚಾಗುತ್ತದೆ. 40 ನೇ ವಯಸ್ಸಿನಲ್ಲಿ ಪಿಂಚಣಿ ಬಯಸುವ ವ್ಯಕ್ತಿಯು ತಿಂಗಳಿಗೆ 291 ರೂ. ಹೂಡಿಕೆ ಮಾಡಬೇಕು. ಇದರೊಂದಿಗೆ ತಿಂಗಳಿಗೆ 1000 ರೂ.ಪಿಂಚಣಿ ಪಡೆಯಬಹುದು. 40 ವರ್ಷದಿಂದ ತಿಂಗಳಿಗೆ ರೂ.5,000 ಪಿಂಚಣಿ ಬೇಕಾದರೆ ತಿಂಗಳಿಗೆ ರೂ.1,454 ಠೇವಣಿ ಇಡಬೇಕು. ಪ್ರೀಮಿಯಂ ಪಾವತಿ ವರ್ಷಗಳು 42, 40, 35, 30, 25, 20. ಪ್ರೀಮಿಯಂ ಪಾವತಿಯ ಅವಧಿಯು ನಿಮ್ಮ ವಯಸ್ಸನ್ನು ಅವಲಂಬಿಸಿ ಬದಲಾಗುತ್ತದೆ.
APY ಪ್ರಯೋಜನಗಳು..
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80CCD ಅಡಿಯಲ್ಲಿ ತೆರಿಗೆ ಪ್ರಯೋಜನಗಳು ಸಹ ಈ ಯೋಜನೆಗೆ ಅನ್ವಯಿಸುತ್ತವೆ. ಸೆಕ್ಷನ್ 80CCD ಅಡಿಯಲ್ಲಿ ಲಭ್ಯವಿರುವ ಗರಿಷ್ಠ ಕಡಿತವು ರೂ 2 ಲಕ್ಷದವರೆಗೆ ಇರುತ್ತದೆ.