ದುಬೈ : ಐಪಿಎಲ್ 2020 ರ 13ನೇ ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆದ ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ 37 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನೀಡಿದ 175 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ತಾನ್ ರಾಯಲ್ಸ್ ಜೋಸ್ ಬಟ್ಲರ್ (21 ರನ್, 16 ಎಸೆತ), ಟಾಮ್ ಕರಣ್ (54 ರನ್, 36 ಎಸೆತ), ಅವರ ಆಟದ ನೆರವಿನಿಂದ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿ 37 ರನ್ ಗಳ ಅಂತರದಿಂದ ಸೋಲನುಭವಿಸಿತು. ನೈಟ್ ರೈಡರ್ಸ್ ತಂಡದ ಪರ ಶಿವಂ ಮಾವಿ, ನಾಗರಕೋಟಿ, ವರುಣ್ ಚಕ್ರವರ್ತಿ ತಲಾ 2 ವಿಕೆಟ್, ಪ್ಯಾಟ್ ಕಮಿನ್ಸ್, ಸುನಿಲ್ ನರೇನ್, ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇನ್ನು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭಿಕ ಆಟಗಾರ ಶುಭ್ ಮಾನ್ ಗಿಲ್ ( 47 ರನ್, 34 ಎಸೆತ), ನಿತೀಶ್ ರಾಣಾ ( 22 ರನ್, 17 ಎಸೆತ ) ಆಂಡ್ರ್ಯು ರಸೆಲ್ (24 ರನ್, 14 ಎಸೆತ), ಮಾರ್ಗನ್ (34 ರನ್, 23 ಎಸೆತ ) ಅವರ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ರಾಜಸ್ತಾನ್ ರಾಯಲ್ಸ್ ಪರ ಜೊಫ್ರಾ ಆರ್ಚರ್ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ನೈಟ್ ರೈಡರ್ಸ್ ತಂಡದ ಪರ 2 ಪ್ರಮುಖ ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಶಿವಂ ಮಾವಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.