ಬಳ್ಳಾರಿ,ಫೆ.11: ಬಳ್ಳಾರಿ ನಗರದ 5ನೇ ವಾರ್ಡಿನ ಕೊಂಡಾಪುರ ಗುಡಿಸಿಲಿನಲ್ಲಿ ನಿನ್ನೆ ರಾತ್ರಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ 3 ಗುಡಿಸಿಲುಗಳು ಸಂಪೂರ್ಣ ಸುಟ್ಟುಹೋಗಿದೆ. ಈ ವಿಷಯ ತಿಳಿದ ಕೂಡಲೇ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಸ್ಥಳಕ್ಕೆ ಅಗ್ನಿಶಾಮಕ ವಾಹನವನ್ನು ಕಳಿಸಿ ಬೆಂಕಿ ನಂದಿಸುವ ವ್ಯವಸ್ಥೆ ಮಾಡಿದರು.
ನಂತರ ಶಾಸಕರಾದ ಜಿ. ಸೋಮಶೇಖರ್ ರೆಡ್ಡಿ ಅವರು ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ತಹಸೀಲ್ದಾರ್ ರೆಹಮಾನ್ ಪಾಶಾ, ಕಂದಾಯ ನಿರೀಕ್ಷಕರು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಬೆಂಕಿ ಅವಘಡದಲ್ಲಿ ಹಣ, ಅಪಾರ ದವಸ ಧಾನ್ಯಗಳು, ಬಟ್ಟೆಗಳು ಹಾಗೂ ಇನ್ನಿತರ ಗೃಹ ಉಪಯೋಗಿ ವಸ್ತುಗಳು ಸುಟ್ಟು ನಷ್ಟ ಉಂಟಾಗಿದ್ದು, ಗುತ್ತಿಗೆ ಉಳುಮೆಯದಾರ ದವಸದಾನ್ಯ ಮಾರಿ ಬಂದ 2.50 ಲಕ್ಷ ರೂಪಾಯಿ ಹಣವನ್ನು ಜಮೀನಿನ ಮಾಲೀಕನಿಗೆ ನೀಡಲು ಮನೆಯಲ್ಲಿಟ್ಟಿದ್ದ, ಹಣವು ಕೂಡ ಬೆಂಕಿ ಅವಘಡದಲ್ಲಿ ಸುಟ್ಟುಹೋಗಿದೆ.
ಶಾಸಕ ಸೋಮಶೇಖರ್ ರೆಡ್ಡಿ ಅವರು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಸೂಚಿಸಿದ್ದು, ಸಂತ್ರಸ್ತರಿಗೆ ಧೈರ್ಯ ತುಂಬಿ, ತಾತ್ಕಾಲಿಕವಾಗಿ ರೇಷನ್, ಬಟ್ಟೆ ಹಾಗೂ ಹಣ ನೀಡಿ ಇನ್ನಿತರ ಪರಿಹಾರ ವ್ಯವಸ್ಥೆ ಮಾಡಿದ್ದು, ಸ್ಲಂ ಬೋರ್ಡ್ ವತಿಯಿಂದ ಸಂತ್ರಸ್ತ 3 ಕುಟುಂಬಗಳಿಗೆ ಮನೆಯನ್ನು ಕಟ್ಟಿ ಕೊಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ರಾಬಕೊ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ವೀರಶೇಖರ ರೆಡ್ಡಿ, ಮುಖಂಡರಾದ ಶ್ರೀನಿವಾಸ ಮೋತ್ಕರ್, ಪಾಲಣ್ಣ, ಕೃಷ್ಣರೆಡ್ಡಿ ಹಾಗೂ ಇನ್ನಿತರ ಮುಖಂಡರುಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.