ಆಹಾರ ಮತ್ತು ಪಾನೀಯ ಸವಾಲುಗಳು ಸಾಮಾಜಿಕ ಮಾಧ್ಯಮದ ಯುಗವನ್ನು ಆಳುತ್ತಿವೆ. ಅವು ಮೊಬೈಲ್ ಪರದೆಗಳಲ್ಲಿ ಆಸಕ್ತಿದಾಯಕವಾಗಿ ಕಾಣಬಹುದಾದರೂ, ಅವು ಹೆಚ್ಚಾಗಿ ಅಪಾಯಕಾರಿ ಮತ್ತು ದೇಹ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಇತ್ತೀಚಿನ ಡ್ರಿಂಕಿಂಗ್ ಚಾಲೆಂಜ್ನಲ್ಲಿ, 21 ವರ್ಷದ ಇನ್ಫ್ಲುಯೆನ್ಸರ್ ವಿಸ್ಕಿ ಕುಡಿಯುವಾಗ ಸಾವನ್ನಪ್ಪಿದ್ದಾನೆ.
ಆನ್ಲೈನ್ನಲ್ಲಿ “ಬ್ಯಾಂಕ್ ಲೀಸೆಸ್ಟರ್” ಎಂದು ಜನಪ್ರಿಯವಾಗಿರುವ ಥಾಯ್ ಇನ್ಫ್ಲುಯೆನ್ಸರ್ ತನಾಕರ್ಣ್ ಕಾಂಥೀ ಅವರು ಚಾಲೆಂಜ್ ಭಾಗವಾಗಿ 30,000 ಥಾಯ್ ಬಹ್ತ್ (75,228 ರೂ.)ಗಾಗಿ ಎರಡು ಬಾಟಲಿ ವಿಸ್ಕಿ ಕುಡಿದ ಬಳಿಕ ಸಾವನ್ನಪ್ಪಿದ್ದಾರೆ.
ಡಿಸೆಂಬರ್ 25 ರಂದು ಚಂತಬುರಿಯ ಥಾ ಮಾಯ್ ಜಿಲ್ಲೆಯಲ್ಲಿ ನಡೆದ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಈ ಘಟನೆ ನಡೆದಿದ್ದು, ಬೌದ್ಧಿಕ ಅಸಾಮರ್ಥ್ಯ ಹೊಂದಿದ್ದ ಯುವಕ ಕಾಂತೀ ರಾತ್ರಿ 11ರ ಸುಮಾರಿಗೆ ಆಗಮಿಸಿದ್ದ. ಪಾರ್ಟಿಯ ಸಮಯದಲ್ಲಿ, ಕಾಂಥೀಗೆ ಪ್ರತಿ ಬಾಟಲಿಗೆ 10,000 ಬಾತ್ ನಗದು ಪ್ರಸ್ತಾಪದೊಂದಿಗೆ 350 ಎಂಎಲ್ ಬಾಟಲ್ ರೀಜೆನ್ಸಿ ವಿಸ್ಕಿಯನ್ನು ಕುಡಿಯುವಂತೆ ಸವಾಲು ಹಾಕಲಾಯಿತು.
ಆತ ಚಾಲೆಂಜ್ ಅನ್ನು ಸ್ವೀಕರಿಸಿ ಕೇವಲ 20 ನಿಮಿಷಗಳಲ್ಲಿ ಎರಡು ಬಾಟಲಿಗಳನ್ನು ಕುಡಿದ್ದಾನೆ. ಪರಿಣಾಮ ಅತಿಯಾದ ಮದ್ಯಪಾನದಿಂದಾಗಿ ಆತ ಕೂಡಲೇ ಪ್ರಜ್ಞೆ ಕಳೆದುಕೊಂಡಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಆತ ಆಲ್ಕೋಹಾಲ್ ಪಾಯ್ಸನಿಂಗ್‌ನಿಂದ ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಿಸಿದ್ದಾರೆ.
ಯುವಕ ಕಾಂತಿಗೆ ಮದ್ಯ ಕುಡಿಯಲು ಚಾಲೆಂಜ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಯುವ ಪ್ರಭಾವಿ ವ್ಯಕ್ತಿಯೊಬ್ಬನ ಸಾವು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ. ಇದರ ನಂತರ, ಕಾಂಥೀ ಅವರು ತಮ್ಮ ಕುಟುಂಬಕ್ಕಾಗಿ ಹಣ ಸಂಪಾದಿಸಲು ಇಂತಹ ಅತಿರೇಕದ ಸವಾಲುಗಳನ್ನು ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.
“ನನ್ನ ಕುಟುಂಬವನ್ನು ಪೋಷಿಸುವ ಸಲುವಾಗಿ ಶ್ರೀಮಂತರಿಂದ ಹಣ ಪಡೆಯಲು ನಾನು ಚಾಲೆಂಜ್ ಹಾಗೂ ಅವಮಾನ ಎದುರಿಸಲೂ ಸಿದ್ಧನಿದ್ದೇನೆ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.