ಕೊಲ್ಲಂ : ಎರಡೂವರೆ ವರ್ಷ ವಯಸ್ಸಿನ ಮಗು ಮನೆಯಿಂದ ಕಾಣೆಯಾಗಿ ಆತಂಕ ಸೃಷ್ಟಿಸಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್ ಸಮೀಪದ ತಡಿಕ್ಕಾಡ್ ನಲ್ಲಿ ನಡೆದಿದೆ.
ಹೌದು, ಅನ್ಸಾರಿ ಮತ್ತು ಫಾತಿಮಾ ದಂಪತಿಯ ಪುತ್ರ ಫರ್ಹಾನ್ ಎಂಬ ಮಗು ಶುಕ್ರವಾರ ಸಂಜೆ ಮನೆ ಬಳಿ ಆಟವಾಡುತಿದ್ದಾಗ ಹಠಾತ್ ಕಾಣೆಯಾಗಿದ್ದ. ಮಗು ಕಾಣೆಯಾಗಿ ಸ್ವಲ್ಪ ಹೊತ್ತಿನ ಬಳಿಕ ಅಳುವುದು ಕೇಳಿಸಿದೆ ಎಂದು ತಾಯಿ ಫಾತಿಮಾ ಹೇಳಿದ್ದರು. ಪೋಷಕರು ಮತ್ತು ಸ್ಥಳೀಯರು ರಾತ್ರಿಯಿಡೀ ಮಗುವಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಶನಿವಾರ ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮ ದಳದ ಸಿಬ್ಬಂದಿ ಮತ್ತು ಸ್ಥಳೀಯರು, ತೀವ್ರ ಹುಡುಕಾಟ ನಡೆಸಿದರು. ಕೊನೆಗೆ ಮಗು ಮನೆ ಸಮೀಪದ ರಬ್ಬರ್ ತೋಟದಲ್ಲಿ ಪತ್ತೆಯಾಗಿದ್ದು, ತಕ್ಷಣ ಮಗುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗು ಪತ್ತೆಯಾದ ಸ್ಥಳದಲ್ಲಿ ಹಿಂದಿನ ದಿನ ತೀವ್ರ ಹುಡುಕಾಟ ನಡೆಸಲಾಗಿತ್ತು, ಅಲ್ಲಿ ಮಗು ಇರಲಿಲ್ಲ. ಆದರೆ ಮರುದಿನ ಬೆಳಿಗ್ಗೆ ಮಗು ಅಲ್ಲಿಯೇ ಹೇಗೆ ಪತ್ತೆಯಾಯಿತು ಎಂಬುವುದು ದೊಡ್ಡ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ, ಜೋರು ಮಳೆ ಸುರಿಯುತ್ತಿದ್ದರೂ ಎರಡೂವರೆ ವರ್ಷದ ಮಗು ರಾತ್ರಿಯಿಡೀ ರಬ್ಬರ್ ತೋಟದಲ್ಲಿ ಹೇಗಿತ್ತು? ಎಂಬ ಗೊಂದಲವು ಉಂಟಾಗಿದ್ದು, ಈ ಕುರಿತು ಕೂಲಂಕುಷ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.