ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಎರಡನೇ ದಿನದಂದು ನಡೆದ ಗಣಿತ ಪರೀಕ್ಷೆಯಲ್ಲಿ ರಾಜ್ಯಾದ್ಯಂತ 12,533 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಯಾವುದೇ ಕೇಂದ್ರಗಳಿಂದ ಅಕ್ರಮ ಪ್ರಕರಣಗಳು ವರದಿಯಾಗಿಲ್ಲ. 2024ರ ಪರೀಕ್ಷೆಗಳಿಂದ ಜಾರಿಗೆ ತಂದ ಪರೀಕ್ಷೆಗಳ ವೆಬ್ ಸ್ಟ್ರೀಮಿಂಗ್ನಿಂದಾಗಿ ದುಷ್ಕೃತ್ಯಗಳನ್ನು ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೈರು ಹಾಜರಾಗುವವರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಮುಖ್ಯವಾಗಿ ಮೂರು ಪರೀಕ್ಷೆಗಳೇ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. “ವಿದ್ಯಾರ್ಥಿಗಳು ತಮ್ಮ ಸಿದ್ಧತೆಯ ಬಗ್ಗೆ ವಿಶ್ವಾಸ ಹೊಂದಿಲ್ಲದಿದ್ದರೆ, ಇನ್ನೂ ಎರಡು ಪರೀಕ್ಷೆಗಳಿಗೆ ಹಾಜರಾಗಲು ಅವಕಾಶವಿರುವುದರಿಂದ, ಅವರು ಪರೀಕ್ಷೆಗಳನ್ನು ಬಿಟ್ಟುಬಿಡುತ್ತಾರೆ” ಎಂದು ಅಧಿಕಾರಿಯೊಬ್ಬರು ಹೇಳಿದರು.
ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು 1,510, ರಾಯಚೂರಿನಲ್ಲಿ 1,058 ಮತ್ತು ವಿಜಯಪುರದಲ್ಲಿ 1,010 ಮಂದಿ ಗೈರು ಹಾಜರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 79, ಚಾಮರಾಜನಗರದಲ್ಲಿ 80 ಮತ್ತು ಹಾಸನದಲ್ಲಿ 119 ಮಂದಿ ಗೈರು ಹಾಜರಾಗಿದ್ದಾರೆ.
ಗಣಿತದ ಪ್ರಶ್ನೆ ಪತ್ರಿಕೆ ಕಠಿಣವಾಗಿರಲಿಲ್ಲ, ಆದರೆ ಕೆಲವು ಪ್ರಶ್ನೆಗಳು ಸ್ವಲ್ಪ ಟ್ರಿಕಿ ಎಂದು ವಿದ್ಯಾರ್ಥಿಗಳು ಹೇಳಿದರು. ವಿದ್ಯಾರ್ಥಿ ರೋಹಿತ್ ಕೆ, “ಒಟ್ಟಾರೆಯಾಗಿ ಪತ್ರಿಕೆಯಲ್ಲಿ ಅಂಕ ಗಳಿಸುವುದು ಸುಲಭವಾಗಿತ್ತು. ಕೆಲವು ಒಂದು ಮತ್ತು ಎರಡು ಅಂಕಗಳ ಪ್ರಶ್ನೆಗಳು ಬಹಳ ಜಟಿಲವಾಗಿದ್ದವು. ಹೀಗಾಗಿ ಹೆಚ್ಚು ಯೋಚಿಸಿ ಬರೆಯಬೇಕಾದ ಅಗತ್ಯವಿತ್ತು ಎಂದಿದ್ದಾನೆ.