ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಜತೆಗಿದ್ದ ಗೆಳೆಯನನ್ನು ಬಾಟಲಿಯಿಂದ ಹೊಡೆದು ಕೊಲೆ ಮಾಡಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಕಸ್ತೂರಿ ಬಾ ನಗರದ ನಿವಾಸಿ ಯೋಗೇಂದ್ರ ಸಿಂಗ್ (26) ಕೊಲೆಯಾದ ದುರ್ದೈವಿ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಉಮೇಶ್ ಎಂಬ ಆರೋಪಿಯನ್ನು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯೋಗೇಂದ್ರ ಮತ್ತು ಉಮೇಶ್ ಇಬ್ಬರು ಟ್ರಾವೆಲ್ಸ್‌ನ ಬಸ್ ಚಾಲಕರಾಗಿದ್ದು, ಹೊಸಗುಡ್ಡದಹಳ್ಳಿಯ ಕಲಾ ವೈನ್ಸ್ ಶಾಪ್‌ನಲ್ಲಿ ಭಾನುವಾರ ರಾತ್ರಿ ಈ ಸ್ನೇಹಿತರ ಮಧ್ಯೆ ಜಗಳ ನಡೆದಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಗೆಳೆಯನಿಗೆ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿ ಉಮೇಶ್ ಹತ್ಯೆಗೈದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಬ್ಬಕ್ಕೆ ಬಂದವ ಹೆಣವಾದ:
ತಮ್ಮ ತಂದೆ-ತಾಯಿ ಜತೆ ಕಸ್ತೂರಿ ಬಾ ನಗರದಲ್ಲಿ ನೆಲೆಸಿದ್ದ ಯೋಗೇಂದ್ರ ಸಿಂಗ್, ಕೋಲಾರ ಜಿಲ್ಲೆ ನರಸಾಪುರದ ಖಾಸಗಿ ಕಂಪನಿಯಲ್ಲಿ ಚಾಲಕನಾಗಿದ್ದ. ಇನ್ನು ಕಸ್ತೂರಿ ಬಾ ನಗರದಲ್ಲಿ ವಾಸವಾಗಿದ್ದ ಉಮೇಶ್ ಕೂಡ ಚಾಲಕನಾಗಿದ್ದ. ಹೀಗಾಗಿ ಒಂದೇ ಪ್ರದೇಶದ ನಿವಾಸಿಗಳಾಗಿದ್ದರಿಂದ ಹಲವು ವರ್ಷಗಳಿಂದ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ದಸರಾ ರಜೆ ಹಿನ್ನೆಯಲ್ಲಿ ಮನೆಗೆ ಬಂದಿದ್ದ ಯೋಗೇಂದ್ರ, ಸೋಮವಾರ ಬೆಳಗ್ಗೆ ಕೆಲಸಕ್ಕೆ ಮರಳಬೇಕಿತ್ತು. ಅಂತೆಯೇ ಭಾನುವಾರ ರಾತ್ರಿ ಗೆಳೆಯ ಉಮೇಶ್ ಜತೆ ಕಲಾ ವೈನ್ಸ್‌ಗೆ ಮದ್ಯ ಸೇವನೆಗೆ ಆತ ತೆರಳಿದ್ದಾನೆ. ಆ ವೇಳೆ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಶುರುವಾದ ಜಗಳವು ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡಿದೆ.