ವಯನಾಡ್(ಕೇರಳ): ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಇಂದು ಮುಂಜಾನೆ ಎರಡರಿಂದ ಮೂರು ಭಾರಿ ಭೂಕುಸಿತ ಉಂಟಾಗಿದೆ. ಇದುವರೆಗೆ ಅವಶೇಷಗಳಡಿ ಸಿಲುಕಿದ ಮೂವರು ಮಕ್ಕಳು ಸೇರಿ 67 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಇನ್ನೂ ಹಲವು ಮಂದಿ ಸಿಕ್ಕಿಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಸಾವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಸುಮಾರು 400 ಕುಟುಂಬಗಳು ತೊಂದರೆಗೊಳಗಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸುತ್ತಿವೆ. ಮೆಪ್ಪಾಡಿ ಸಮೀಪದ ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ 1 ಗಂಟೆಯ ಸುಮಾರಿಗೆ ಮೊದಲ ಭೂಕುಸಿತ ಸಂಭವಿಸಿದೆ. ನಂತರ ಬೆಳಗಿನ ಜಾವ 4.10ರ ಸುಮಾರಿಗೆ ಕಲ್ಪೆಟ್ಟಾದಲ್ಲಿ ಭೂಕುಸಿತ ಸಂಭವಿಸಿತು. ಪರಿಣಾಮ, ಹಲವು ಕುಟುಂಬಗಳು ಕಣ್ಮರೆಯಾಗಿವೆ. ಅಲ್ಲದೇ, ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳನಲ್ಲೂ ಭೂಕುಸಿತವಾಗಿದೆ. ಇಲ್ಲಿನ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಧಾರಾಕಾರ ಮಳೆ ಸುರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಘಟನಾ ಸ್ಥಳಕ್ಕೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ), ಅಗ್ನಿಶಾಮಕ ದಳ ಮತ್ತು ಎನ್ಡಿಆರ್ಎಫ್ ತಂಡಗಳು ದೌಡಾಯಿಸಿವೆ. ಹೆಚ್ಚುವರಿ ಎನ್ಡಿಆರ್ಎಫ್ ತಂಡಗಳನ್ನೂ ರವಾನಿಸಲಾಗಿದೆ.
ಕಣ್ಣೂರಿನಿಂದ ರಕ್ಷಣಾ ಭದ್ರತಾ ದಳದ ಎರಡು ತಂಡಗಳನ್ನು ವಯನಾಡ್ಗೆ ತೆರಳುವಂತೆ ಸೂಚನೆ ನೀಡಲಾಗಿದೆ ಎಂದು ಕೆಎಸ್ಡಿಎಂಎ ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ರಾಜ್ಯ ಅರಣ್ಯ ಸಚಿವ ಎ.ಕೆ.ಸಶೀಂದ್ರನ್ ಸಹ ಧಾವಿಸಿದ್ದಾರೆ. ಚೂರಲ್ಮಲಾ ಪಟ್ಟಣದಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರೆ, ತೊಂಡರ್ನಾಡ್ ಗ್ರಾಮದಲ್ಲಿ ನೇಪಾಳ ಮೂಲದ ಕುಟುಂಬದ ಒಂದು ವರ್ಷದ ಮಗು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ”ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ವಾಯುಪಡೆಯ ಎರಡು ಹೆಲಿಕಾಪ್ಟರ್ಗಳು ಶೀಘ್ರದಲ್ಲೇ ಸೂಲೂರಿನಿಂದ ವಯನಾಡ್ಗೆ ತೆರಳಲಿವೆ” ಎಂದು ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ.