ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಸತತ ಮಳೆಗೆ ಗುಡ್ಡ ಕುಸಿದು 10 ಮಂದಿ ಕಾಣೆಯಾಗಿದ್ದು, 7 ಮಂದಿಯ ಮೃತದೇಹ ಸಿಕ್ಕಿದೆ, ಇನ್ನೂ ಮೂವರು ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಕ್ಷಣಾ ಕಾರ್ಯದಲ್ಲಿ ಸರ್ಕಾರದ ಕಡೆಯಿಂದ ಯಾವುದೇ ವಿಳಂಬವಾಗಿಲ್ಲ, ತ್ವರಿತವಾಗಿ ಮಾಡುತ್ತಿದ್ದೇವೆ, ಈ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಕೀಯ ಕೂಡ ಮಾಡುತ್ತಿಲ್ಲ, ಎನ್ ಡಿಆರ್ ಎಫ್ ತಂಡದೊಂದಿಗೆ ರಾಜ್ಯದ ರಕ್ಷಣಾ ತಂಡ, ಪೊಲೀಸರು ಕೈಜೋಡಿಸಿದ್ದಾರೆ ಎಂದರು.
ಕೇರಳದ ಲಾರಿ ಚಾಲಕ ಅರ್ಜುನ್ ಹುಡುಕಾಟದಲ್ಲಿ ಯಾವುದೇ ವಿಳಂಬವಾಗಿಲ್ಲ. ಕಾರ್ಯಾಚರಣೆಗೆ ಭಾರಿ ಮಳೆ ಸವಾಲಾಗಿದೆ. ಕೇರಳ ಸರ್ಕಾರ ನಮ್ಮ ಸಂಪರ್ಕದಲ್ಲಿದೆ. ದುರ್ಘಟನೆಯಲ್ಲಿ ಮೃತರಾದವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ. ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ್ದು. ರಕ್ಷಣಾ ಕಾರ್ಯಾಚರಣೆ ಬಳಿಕ ಯಾರೇ ತಪ್ಪಿತಸ್ಥರಿದ್ದರೂ ಅವರ ಮೇಲೆ ಕ್ರಮವಾಗುತ್ತದೆ ಎಂದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಕೇರಳ ಮೂಲದ ಲಾರಿ ಚಾಲಕ ಅರ್ಜುನನ ಹುಡುಕಾಟ ತೀವ್ರಗೊಳಿಸಲು ಕೇಂದ್ರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಕೇರಳ ಮೂಲದ ಸುಪ್ರೀಂ ಕೋರ್ಟ್ ವಕೀಲ ಕೆಆರ್ ಸುಭಾಷ್ ಚಂದ್ರನ್ ಅವರು ಪಿಐಎಲ್ ಸಲ್ಲಿಸಿದ್ದಾರೆ. ಹಿರಿಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಮುಂದೆ ಅರ್ಜಿ ಮಂಡಿಸಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಅನುಮತಿ ನೀಡಿದೆ.
ಸಿದ್ದರಾಮಯ್ಯನವರು ಭೇಟಿ ನೀಡಿದ ಹೊತ್ತಿನಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಮಳೆಯ ನಡುವೆಯೇ ಗುಡ್ಡ ಕುಸಿದ ಸ್ಥಳವನ್ನು ವೀಕ್ಷಿಸಿ ಅಧಿಕಾರಿಗಳು, ಪೊಲೀಸರಿಂದ ಮಾಹಿತಿ ಪಡೆದುಕೊಂಡರು.
ಪರಿಹಾರ: ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರ ಜೀವವನ್ನು ವಾಪಸ್ ತರಲು ಸಾಧ್ಯವಿಲ್ಲ, ಕುಟುಂಬಸ್ಥರಿಗೆ ಹಣದ ಸಹಾಯ ಮಾಡಬಹುದು. ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ನೀಡಲಾಗುವುದು ಎಂದು ಘೋಷಿಸಿದರು.