ಚರ್ಬಾ (ಹಿಮಾಚಲಪ್ರದೇಶ): ಇಲ್ಲಿನ ಸರ್ಕಾರಿ ಪ್ರೌಢಶಾಲೆಯೊಂದು ಅರೆಕಾಲಿಕ ಶಿಕ್ಷಕ ಹುದ್ದೆ ಹಾಗೂ ವಾಚ್ಮನ್ ಪೋಸ್ಟ್‌ಗೆ ಕರೆದಿರುವ ನೇಮಕಾತಿ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಶಿಕ್ಷಕರಿಗಿಂತ ಹೆಚ್ಚಿನ ಸಂಬಳವನ್ನು ವಾಚ್ಮನ್ಗೆ ನೀಡುತ್ತಿರುವುದು ಚರ್ಚೆಯ ವಿಷಯವಾಗಿದೆ.
ಅರೆಕಾಲಿಕ ಶಿಕ್ಷಕರಿಗೆ ಶೈಕ್ಷಣಿಕ ಅರ್ಹತೆ B.Sc./M.Sc, ವಾಚ್ಮನ್ ಹುದ್ದೆಗೆ 10 ನೇ ತರಗತಿ ಆಗಿರಬೇಕು ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ, ಶಿಕ್ಷಕರ ಸಂಬಳ 8,450 ರೂಪಾಯಿ ಇದ್ದರೆ, ವಾಚ್‌ಮನ್ಗೆ 10,630 ರೂಪಾಯಿ ಎಂದು ತಿಳಿಸಲಾಗಿದ್ದು, ಎರಡೂ ಹುದ್ದೆಗಳಿಗೆ ಅಕ್ಟೋಬರ್ 20 ರಂದು ಸಂದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯ ಶಿಕ್ಷಣ ಇಲಾಖೆಯಡಿ ಪ್ರಕಟಿಸಲಾದ ಈ ನೇಮಕಾತಿ ಪ್ರಕಟಣೆಯ ಅನ್ವಯ ಕಷ್ಟಪಟ್ಟು ಪಡೆದ ಪದವಿಗಳು ವ್ಯರ್ಥ ಎಂಬಂತೆ ಆಲೋಚನೆಗಳು ಮೂಡುವಂತೆ ಮಾಡಿದೆ. ವಾಚ್ಮನ್ ಹುದ್ದೆಗಿಂತ ಶಿಕ್ಷಕ ಹುದ್ದೆಯೇ ಕನಿಷ್ಟವಾಯಿತಾ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ನರೇಗಾ ಯೋಜನೆಯಡಿ ಕೆಲಸ ಮಾಡಿದಲ್ಲಿ ದಿನಕ್ಕೆ 300 ರೂಪಾಯಿಯಂತೆ ತಿಂಗಳಿಗೆ 9 ಸಾವಿರ ಪಾವತಿಸಲಾಗುತ್ತದೆ. ಆದರೆ ಶಿಕ್ಷಕ ಹುದ್ದೆಗೆ ಅದಕ್ಕಿಂತ ಕಡಿಮೆ ಸಂಬಳ ನೀಡಲಾಗುತ್ತಿದೆ.