ವಾಷಿಂಗ್ಟನ್ (ಅಮೆರಿಕ): ಭೂಮಿಯ ಮೇಲಿರುವವರು ಒಂದು ದಿನದಲ್ಲಿ ಒಮ್ಮೆ ಸೂರ್ಯೋದಯ ಹಾಗೂ ಒಮ್ಮೆ ಸೂರ್ಯಾಸ್ತ ನೋಡುತ್ತಾರೆ. ಆದರೆ, ಭಾರತ ಮೂಲದ ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್ ಹಾಗೂ ಅವರ ಜತೆಗೆ ಇರುವ ಇತರ ಗಗನಯಾನಿಗಳು ಒಂದೇ ದಿನಕ್ಕೆ 16 ಸೂರ್ಯೋದಯ ಹಾಗೂ ಸೂರ್ಯಾಸ್ತಗಳನ್ನು ವಿಕ್ಷಿಸುತ್ತಾರೆ.
ಹೌದು, ಅಚ್ಚರಿ ಎನ್ನಿಸಿದರೂ ಇದು ನಿಜ. ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಕೇವಲ 24 ಗಂಟೆಗಳ ಅವಧಿಯಲ್ಲಿ 16 ಸೂರ್ಯೋದಯಗಳು ಮತ್ತು ಸೂರ್ಯಾಸ್ತಗಳನ್ನು ಕಾಣಬಹುದಾಗಿದೆ. ಅವರು ಇರುವ ಅಂತರಿಕ್ಷ ಕೇಂದ್ರವು ಭೂಮಿಯ ಸುತ್ತ ಸುತ್ತುವ ಗಮನಾರ್ಹ ವೇಗದಿಂದಾಗಿ ಇದು ಸಂಭವಿಸುತ್ತದೆ.
ಅಂತರಿಕ್ಷ ಕೇಂದ್ರವು ಗಂಟೆಗೆ ಸರಾಸರಿ 28 ಸಾವಿರ ಕಿ.ಮೀ. ವೇಗದಲ್ಲಿ ಸುತ್ತುತ್ತದೆ. ಅಂದರೆ ಅದು ಪ್ರತಿ 90 ನಿಮಿಷಗಳಿಗೊಮ್ಮೆ (ಒಂದೂವರೆ ತಾಸಿಗೆ ಒಮ್ಮೆ) ನಮ್ಮ ಗ್ರಹದ ಸುತ್ತ ಪೂರ್ಣ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ. ಪ್ರತಿ ಬಾರಿ ಅದು ಹೀಗೆ ಮಾಡಿದಾಗಲೂ ಒಮ್ಮೆ ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಅಲ್ಲಿಂದ ಕಾಣಬಹುದು. ಹೀಗಾಗಿ ಕೇವಲ 24 ತಾಸಿನಲ್ಲಿ ಅಂತರಿಕ್ಷ ಕೇಂದ್ರದಿಂದ ಸೂರ್ಯ ಉದಯ-ಅಸ್ತ ಗೋಚರಿಸುತ್ತವೆ.
ಈ ಬಗ್ಗೆ 2013ರಲ್ಲಿ ಗುಜರಾತ್‌ಗೆ ಬಂದಿದ್ದ ಸುನಿತಾ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸಮ್ಮುಖದಲ್ಲಿ ಮಾತನಾಡಿ ‘ನಾನು ನಿತ್ಯ 16 ಸೂರ್ಯೋದಯಗಳು ಮತ್ತು 16 ಸೂರ್ಯಾಸ್ತಗಳನ್ನು ನೋಡಿದ ಅದೃಷ್ಟಶಾಲಿ’ ಎಂದಿದ್ದರು..