ಅರಸೀಕೆರೆ (ಹಾಸನ): ನನ್ನ ವಿರುದ್ಧ ಏನೋ ಸಂಚು ನಡೆಯುತ್ತಿದ್ದು, ಮಿಮಿಕ್ರಿ ಆಡಿಯೊ ಸೃಷ್ಟಿ ಮಾಡಿ ವೈರಲ್ ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ತಮ್ಮ ವಿರುದ್ಧದ ಹನಹಂಚಿಕೆ ಆಡಿಯೋ ಸುಳ್ಳೆಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮನೆಗೆ ನಿತ್ಯ ನೂರಾರು ಜನರು ಬರುತ್ತಾರೆ. ನಾನು ಮಾತನಾಡಿದ್ದನ್ನ ತಿರುಚಲಾಗಿದೆ. ಖಂಡಿತಾ ಅದು ನನ್ನ ಮಾತುಗಳಲ್ಲ. ಚುನಾವಣೆ ನಡೆದು ಐದು ತಿಂಗಳು ಕಳೆದಿದ್ದು, ಆಗ ಮಾತನಾಡಿದ್ದೆಂದು ಈಗ ಆಡಿಯೋ ಬಿಟ್ಟಿದ್ದಾರೆ. ಕಟ್ ಆ್ಯಂಡ್ ಪೇಸ್ಟ್ ಮಾಡಿ ಈ ರೀತಿಯ ಆಡಿಯೊ ಸೃಷ್ಟಿ ಮಾಡಲಾಗಿದೆ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.
ಈ ಹಿಂದೆ ಕೂಡ ಇಂತಹ ಆಡಿಯೊ ಎಡಿಟ್ ಮಾಡಿ ಹರಿಯ ಬಿಡಲಾಗಿತ್ತು. ಕೆಲವರು ಇಂತಹದೆ ಪ್ರವೃತ್ತಿ ಮಾಡುತ್ತಾರೆ. ಇನ್ನು ಮುಂದೆ ಈ ರೀತಿ ಮಾಡೋದರ ಬಗ್ಗೆ ಎಚ್ಚರ ವಹಿಸುತ್ತೇವೆ. ಈ ಬಗ್ಗೆ ನಮ್ಮ ವಕೀಲರನ್ನು ಸಂಪರ್ಕ ಮಾಡಿ ದೂರು ಕೊಡೊ ಬಗ್ಗೆ ತೀರ್ಮಾನಿಸಿದ್ದೇನೆ. ಎನೂ ಬೇಕಾದರೂ ತನಿಖೆ ಮಾಡಲಿ ಎದುರಿಸುತ್ತೇನೆ ಎಂದಿದ್ದಾರೆ.
ಏನಿದು ಆಡಿಯೋ?
ಸಿಎಂ ಹಾಗೂ ಡಿಸಿಎಂ ನಿರ್ದೇಶನದಂತೆ ಲೋಕಸಭೆ ಚುನಾವಣೆ ವೇಳೆ ಹಾಸನ ಜಿಲ್ಲೆಯಾದ್ಯಂತ ಕೋಟ್ಯಂತರ ರೂಪಾಯಿ ಹಂಚಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 5 ಕೋಟಿ, ಮಾಜಿ ಎಂಎಲ್ ಸಿ ಗೋಪಾಲಸ್ವಾಮಿ 1 ಕೋಟಿ, ನಾನು 1 ಕೋಟಿ ನೀಡುತ್ತೇನೆ, ಒಟ್ಟಾರೆ 7ಕೋಟಿ ಹಂಚಬೇಕು ಎಂದು ಶಾಸಕ ಶಿವಲಿಂಗೇಗೌಡ ತಮ್ಮ ಪಕ್ಷದ ಮುಖಂಡರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರತಿ ವೋಟಿಗೆ ₹500 ಕೊಡಬೇಕು. ಒಟ್ಟು ಶೇ. 68 ರಿಂದ 70 ಜನರಿಗೆ ಹಣ ಕೊಡಿ. ಯಾರು ನಮಗೆ ಓಟ್ ಹಾಕುತ್ತಾರೆ ಎಂಬುದು ಗೊತ್ತಿರುತ್ತೆ, ಅವರಿಗೆ ಕೊಡಿ. ಸಿಎಂ, ಡಿಸಿಎಂ, ಉಸ್ತುವಾರಿ ಅವರೇ ತೀರ್ಮಾನ ಮಾಡಿದ್ದಾರೆ, ಅದರಂತೆ ಹಣ ಹಂಚಲಿ. ಶಿವರಾಂ ಅವರು ಮನೆಗೊಂದು ಸಾವಿರ ಕೊಡುತ್ತಾ ಇದ್ದಾರಂತೆ. ಅವರ ಶಿಷ್ಯನೇ ಹೇಳಿದ್ದಾರೆ, ಅವರು ಐದು ನೂರು ರೂಪಾಯಿ ಕೊಟ್ಟಿದಾರೆ ಎಂದು ಮಾತನಾಡಿದ್ದಾರೆ ಎನ್ನಲಾಗಿದೆ.