ಹಾವೇರಿ: ಜಿಲ್ಲೆಯ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ತಮ್ಮ ಬಳಿ ₹1.15 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಹೌದು, ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್ ಸಿಗದ್ದರಿಂದ ಬಂಡಾಯವಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ₹1.15 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಖಾದ್ರಿ ಅವರ ಕೈಯಲ್ಲಿ ₹50 ಸಾವಿರ ನಗದು ಹಣವಿದ್ದು, ₹30 ಲಕ್ಷ ಮೌಲ್ಯದ ಟೊಯೋಟಾ ಕಾರು ಸೇರಿ ₹30.50 ಲಕ್ಷ ಮೌಲ್ಯದ ಚರಾಸ್ತಿಯಿದೆ. ಕ್ಯಾಲಕೊಂಡ ಗ್ರಾಮದಲ್ಲಿ ₹25 ಲಕ್ಷ ಮೌಲ್ಯದ 17 ಎಕರೆ ಕೃಷಿ ಭೂಮಿಯಿದೆ. ಹುಲಗೂರು ಗ್ರಾಮದಲ್ಲಿ ಮನೆ, ಹುಬ್ಬಳ್ಳಿಯಲ್ಲಿ ಪ್ಲಾಟ್, ಬೆಂಗಳೂರಿನಲ್ಲಿ ಬಿಡಿಎ ನಿವೇಶನ ಸೇರಿದಂತೆ ₹84 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ.
ಶುಕ್ರವಾರ ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಖಾದ್ರಿ ₹16 ಲಕ್ಷ ಸಾಲವನ್ನು ಈ ಘೋಷಿಸಿಕೊಂಡಿದ್ದಾರೆ. ಇವರ ಪತ್ನಿ ಬಳಿ ₹ 10 ಸಾವಿರ ನಗದು, ₹ 1.20 ಲಕ್ಷ ಮೌಲ್ಯದ ಚಿನ್ನಾಭರಣವಿದೆ.
ಇನ್ನೂ ಖಾದ್ರಿ ವಿರುದ್ಧ ಹುಲಗೂರು ಪೊಲೀಸ್ ಠಾಣೆಯಲ್ಲಿ ಒಂದು ಅಪರಾಧಿಕ ಪ್ರಕರಣ ದಾಖಲಾಗಿದ್ದು, ಸದ್ಯ ಜನಪ್ರತಿನಿಧಿಗಳ ನ್ಯಾಯಾಲಯದಿಂದ ತಡೆಯಾಜ್ಞೆಯಿದೆ. ಹುಲಗೂರಿನಲ್ಲಿ ಹಾಕಿದ್ದ ಭಗವಾಧ್ವಜ ತೆರವುಗೊಳಿಸುವ ಕುರಿತು ಮೊಬೈಲ್‌ನಲ್ಲಿ ಸಂಭಾಷಣೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಇವರ ಮೇಲೆ ಕೇಸ್ ದಾಖಲಾಗಿತ್ತು.