ಹೊಸದಿಲ್ಲಿ: ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಪ್ರಿಯತಮೆಯನ್ನ ಪ್ರಿಯಕರನೇ ಹತ್ಯೆಗೈದು ಹೂತುಹಾಕಿರುವ ಆರೋಪ ಕೇಳಿಬಂದಿದೆ. ಗರ್ಭಿಣಿಯಾಗಿದ್ದ ಆಕೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರೆ, ಪ್ರಿಯಕರ ಗರ್ಭಪಾತಕ್ಕೆ ಪೀಡಿಸುತ್ತಿದ್ದ ಎನ್ನಲಾಗಿದ್ದು, ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಹತ್ಯೆಗೈದಿದ್ದಾಗಿ ತಿಳಿದುಬಂದಿದೆ.
ಪಶ್ಚಿಮ ದೆಹಲಿಯ ನಂಗ್ಲೋಯ್ ನಿವಾಸಿಯಾಗಿದ್ದ ಸೋನಿ(19), ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯಳಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ 6000ಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಳು. ಅಲ್ಲದೇ ತನ್ನ ಪ್ರಿಯಕರ ಸಂಜು ಅಲಿಯಾಸ್ ಸಲೀಂ ಜೊತೆಗಿರುವ ಹಲವಾರು ಫೋಟೋ ಹಾಗೂ ವೀಡಿಯೋಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಆರೋಪಿ ಸಲೀಂ ಸಹ ಆಕೆಯ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋನಿ ಕುಟುಂಬಸ್ಥರು ಹೇಳುವಂತೆ, ಆಕೆ ಹೊಸ ಸ್ನೇಹಿತರನ್ನು ಮಾಡಿಕೊಂಡಿದ್ದರ ಬಗ್ಗೆ ಅನುಮಾನ ಇತ್ತು. ಆದರೆ ಈ ಬಗ್ಗೆ ಆಕೆಯನ್ನು ವಿಚಾರಿಸಿದಾಗ ಆಕೆ ಯಾರ ಹೆಸರನ್ನೂ ಹೇಳಿರಲಿಲ್ಲ ಎಂದು ತಿಳಿಸಿದ್ದಾರೆ.
ಸೋನಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಸಲೀಂನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದಳು. ಆದರೆ ಸಲೀಂ ಹಾಗೆ ಮಾಡಲು ಸಿದ್ಧನಿರಲಿಲ್ಲ, ಮಗುವನ್ನು ಗರ್ಭಪಾತ ಮಾಡಬೇಕೆಂದು ಒತ್ತಾಯಿಸುತ್ತಿದ್ದ. ಹೀಗಾಗಿ ಈ ವಿಷಯವಾಗಿ ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು. ಕಳೆದ ಸೋಮವಾರ, ಸೋನಿ ಮನೆಯಿಂದ ಕೆಲ ವಸ್ತುಗಳನ್ನು ತೆಗೆದುಕೊಂಡು ಸಲೀಂನನ್ನು ಭೇಟಿಯಾಗಲು ತೆರಳಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಲೀಂ ಮತ್ತು ಅವನ ಇಬ್ಬರು ಸ್ನೇಹಿತರು ಸೋನಿಯನ್ನು ಹರಿಯಾಣದ ರೋಹ್ಟಕ್‌ಗೆ ಕರೆದೊಯ್ದು, ಅಲ್ಲಿ ಅವರು ಅವಳನ್ನು ಕೊಂದು ಶವವನ್ನು ಹೂತುಹಾಕಿದ್ದರು. ಸಲೀಂ ಮತ್ತು ಆತನ ಒಬ್ಬ ಸಹಾಯಕನನ್ನು ಬಂಧಿಸಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದು, ಆತನನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.