ಬೆಂಗಳೂರು: ನಟಿ ಸಂಯುಕ್ತ ಹೊರನಾಡು ಅವರು ತಮ್ಮದೇ ಪ್ರಾಣ ಅನಿಮಲ್ ಫೌಂಡೇಶನ್ ಹಾಗೂ ಟೆಕೆಯಾನ್ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 28 ತಿಂಗಳ ಹೆಣ್ಣು ಹುಲಿಯನ್ನು ದತ್ತು ಪಡೆದಿದ್ದಾರೆ.
ಸಂಯುಕ್ತ ಅವರು 2.5 ವರ್ಷದ ಸಿಂಚನ ಎಂಬ ಹೆಣ್ಣು ಹುಲಿ ಮರಿಯನ್ನು ದತ್ತು ಪಡೆದಿದ್ದಾರೆ. ಈ ಹುಲಿಯು ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ಸ್ವಾತಂತ್ರ‍್ಯವಾಗಿ ವಾಸಿಸಲು ಕಷ್ಟ ಸಾಧ್ಯವಾಗಿರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂರಕ್ಷಣಾ ಕೇಂದ್ರದಲ್ಲಿ ನೋಡಿಕೊಳ್ಳಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಯುಕ್ತ ಹೊರನಾಡು ಅವರು, ಟೆಕೆಯಾನ್ ಜೊತೆ ಕೈ ಜೋಡಿಸಿರುವುದು ಖುಷಿ ತಂದಿದೆ. ತೊಂದರೆ ಒಳಗಾದ ಪ್ರಾಣಿಗಳನ್ನು ದತ್ತು ಸ್ವೀಕರಿಸದಕ್ಕೆ ಟೆಕೆಯಾನ್ ಗೆ ಧನ್ಯವಾದ ಎಂದು ಹೇಳಿದರು.
ಟೆಕೆಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಮಾತನಾಡಿ, ಪ್ರಾಣ ಅನಿಮಲ್ ಫೌಂಡೇಶನ್ ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳಿಗೆ ಈ ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ಆರೋಗ್ಯ, ಶಿಕ್ಷಣ ಹಾಗೂ ಸಮಾನತೆ ಮತ್ತು ಸುಸ್ಥಿರತೆ ಸಿಎಸ್‌ಆರ್ ಮೂಲ ಉದ್ದೇಶವಾಗಿದೆ ಎಂದರು.
ಇನ್ನು ಸಂಯುಕ್ತ ಅವರು ಸಿನಿಮಾಗಳ ಹೊರತಾಗಿ ಸಾಮಾಜಿಕ ಕೆಲಸಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಅಂಬುಲೆನ್ಸ್ ಸೇವೆ ಒದಗಿಸಿದ್ದಾರೆ.