ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸಂಚಾರ ದಟ್ಟಣೆ (ಟ್ರಾಫಿಕ್) ಕಡಿಮೆ ಮಾಡುವ ಉದ್ದೇಶದಿಂದ ಸುಮಾರು 287 ಕಿ.ಮೀ. ವ್ಯಾಪ್ತಿಯ ವರ್ತುಲ ರೈಲು ಜಾಲ (ಸರ್ಕುಲರ್ ರೈಲು) ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ವಿಸ್ತ್ರತ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ನಗರದಲ್ಲಿ ಭಾರತ್ ಹೆವಿ ಎಲೆಕ್ಟಿಕಲ್ಸ್ ಲಿಮಿಟೆಡ್ (ಬಿಎಚ್ ಇಎಲ್)- ವಿದ್ಯುನ್ಮಾನ ವಿಭಾಗದಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆಗಳು ಮತ್ತು ಸಂಸ್ಮರಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು ₹23 ಸಾವಿರ ಕೋಟಿ ವೆಚ್ಚದ ವರ್ತುಲ ರೈಲ್ವೆ ಯೋಜನೆಗೆ ಡಿಪಿಆರ್ ಸಿದ್ದಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಡಿಸೆಂಬರ್ ಅಂತ್ಯದೊಳಗೆ ವಿಸ್ತ್ರತ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ವರ್ತುಲ ರೈಲು ಯೋಜನೆಯು ಉಪನಗರ ರೈಲು ಯೋಜನೆಗೆ ಪೂರಕವಾಗಿರಲಿದೆ. ಈ ಯೋಜನೆಯನ್ನು ಮುಂದಿನ ನಾಲ್ಕು ವರ್ಷದಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಅದರ ಆಶಯಕ್ಕೆ ಅನುಗುಣವಾಗಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದ್ದಾರೆ.
2026ರಲ್ಲಿ ಲೋಕಾರ್ಪಣೆ:
ಬೆಂಗಳೂರಿನ ಸಂಚಾರಿ ದಟ್ಟಣೆ ಕಡಿಮೆ ಮಾಡುವಲ್ಲಿ 72 ಕಿ.ಮೀ ವ್ಯಾಪ್ತಿಯ ಉಪನಗರ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. 2026ರ ಜನವರಿಯಲ್ಲಿ ಲೋಕಾರ್ಪಣೆ ಮಾಡಲಾಗುವುದು. ಉಪನಗರ ರೈಲು ಯೋಜನೆ ಕಾಮಗಾರಿಗಳಿಗೆ ಇನ್ನಷ್ಟು ವೇಗ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.